ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಬಗ್ಗೆ ಆರೋಗ್ಯ ಇಲಾಖೆ ಅಂದಾಜಿಸಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸದ್ಯಕ್ಕೆ ಗಂಗಾವತಿ ಉಪ ವಿಭಾಗದಲ್ಲಿ ಬರುವ ಕಾರಟಗಿ, ಕನಕಗಿರಿ ಹಾಗೂ ಗಂಗಾವತಿಯಲ್ಲಿ ಸೋಂಕಿತರು ಕಂಡು ಬಂದರೆ ಅಂಥವರನ್ನು ಪ್ರತ್ಯೇಕ ಇಟ್ಟು ಚಿಕಿತ್ಸೆ ನೀಡಲು ನೂರು ಹಾಸಿಗೆಗಳ ಐಸೋಲೆಷನ್ ವಾರ್ಡ್ ಸಿದ್ಧಪಡಿಸಲಾಗುತ್ತಿದೆ. ತುರ್ತು ಚಿಕಿತ್ಸೆ ಅಗತ್ಯವಿದ್ದವರಿಗೆ ರೆಡ್ ಜೋನ್, ಚಿಕಿತ್ಸೆ ಮತ್ತು ಆರೈಕೆ ಬೇಕಿದ್ದವರಿಗೆ ಯಲ್ಲೋ ಜೋನ್ ಮತ್ತು ಕೇವಲ ನಿಗಾ ಇರುವ ವ್ಯಕ್ತಿಗಳಿಗೆ ಗ್ರೀನ್ ಜೋನ್ ಮಾಡಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ಸಿದ್ಧಪಡಿಸಲಾಗಿದೆ.
ಈ ಕುರಿತು ಗಂಗಾವತಿ ಆಸ್ಪತ್ರೆ ಉಪವಿಭಾಗದ ಮುಖ್ಯಸ್ಥರಾದ ಈಶ್ವರ ಸವುಡಿಯವರು ಆಸ್ಪತ್ರೆಯಲ್ಲಿ ಕೊರೊನಾ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.