ಶಹಜಾನ್ಪುರ, ಉತ್ತರಪ್ರದೇಶ: 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಭಾರತೀಯ ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ. ಇದೀಗ ಈ ಅವಧಿಯ ಕ್ರಾಂತಿ ವೇಳೆ ಬಳಕೆಯಾಗಿರಬಹುದಾದ ಶಸ್ತ್ರಾಸ್ತ್ರಗಳ ಭಂಡಾರ ಉತ್ತರ ಪ್ರದೇಶದ ಶಹಜಾನ್ಪುರದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತ ಬಾಬುರಾಮ್ ಎಂಬುವರು ತಮ್ಮ ಕೃಷಿ ಭೂಮಿಯಲ್ಲಿ ಉಳುಮೆ ಮಾಡುವಾಗ ಕಬ್ಬಿಣದ ಕತ್ತಿಯ ರೀತಿ ವಸ್ತು ಕಂಡು ಬಂದಿದೆ. ಈ ವೇಳೆ ಕುತೂಹಲಗೊಂಡ ರೈತ ಮಣ್ಣು ಅಗೆದಿದ್ದಾರೆ. ಆಗ ನೆಲದಡಿಯಲ್ಲಿ ಹೂತ್ತಿಟ್ಟ ಭಾರಿ ಪ್ರಮಾಣದ ಶಸಾಸ್ತ್ರಗಳು ಕಂಡು ಬಂದಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಏನೆಲ್ಲಾ ಸಿಕ್ಕಿವೆ?: ಈ ಉತ್ಖನನದಲ್ಲಿ 23 ಕತ್ತಿ, 12 ರೈಫಲ್ ಮತ್ತು ಒಂದು ಈಟಿ ಹಾಗೂ ಬಾಕು ಕಂಡು ಬಂದಿದೆ. ರೈಫಲ್ನ ಬ್ಯಾರೆಲ್ಸ್ ಮತ್ತು ಕಬ್ಬಿಣದ ಭಾಗಗಳು ಮಾತ್ರ ಇದ್ದು, ಇದರ ಉಳಿದ ಮರದ ಭಾಗಗಳು ಗೆದ್ದಲು ಹಿಡಿದು ಹಾಳಾಗಿದೆ. ಈ ಶಸಾಸ್ತ್ರಗಳ ವಿನ್ಯಾಸ ನೋಡಿದಾಗ ರೈಫಲ್ಗಳು ಮ್ಯಾಚ್ಲಾಕ್ ಗನ್ಗಳಾಗಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪುರಾತತ್ವ ಇಲಾಖೆಗೆ ಪತ್ರ: ಸದ್ಯ ಈ ಶಸ್ತ್ರಾಸ್ತ್ರಗಳನ್ನು ನಿಗೊಯಿ ಪೊಲೀಸ್ ಠಾಣೆಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು, ಈ ಸಂಬಂಧ ಭಾರತೀಯ ಪುರಾತತ್ವ ಇಲಾಖೆಗೂ ಪತ್ರ ಬರೆಯಲಾಗಿದೆ ಎಂದರು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಳಕೆ ಮಾಡಿರುವ ಸಾಧ್ಯತೆ: ಈ ಶಸಾಸ್ತ್ರಗಳನ್ನು 1857ರ ಕ್ರಾಂತಿಗಳಲ್ಲಿ ಬಳಕೆ ಮಾಡಿರುವ ಸಾಧ್ಯತೆ ಇದೆ. ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದ ನಂತರ ದಂಗೆಕೋರರು ಈ ಪ್ರದೇಶದ ಮೂಲಕ ಪಿಲಿಭಿತ್ ಕಾಡುಗಳಿಗೆ ತೆರಳಿರಬಹುದು. ಅನೇಕ ಸೇನೆಗಳು ತಮ್ಮ ಶಸಾಸ್ತ್ರಗಳನ್ನು ಬಚ್ಚಿಡುವುದಿಲ್ಲ. ಕ್ರಾಂತಿಕಾರಿಗಳು ತಮ್ಮ ಶಸಾಸ್ತ್ರಗಳನ್ನು ಈ ಮೈದಾನದಲ್ಲಿ ಹೂತಿಟ್ಟಿರುವ ಸಾಧ್ಯತೆ ಇದೆ. ಮ್ಯಾಚ್ಲಾಕ್ ರೈಫಲ್ಗಳು ಇಂದಿಗೂ ಸಹ ಗನ್ಪೌಡರ್ನಿಂದ ತುಂಬಿದೆ. ಈ ರೀತಿಯ ಗನ್ಗಳನ್ನು ಈ ಪ್ರದೇಶದಲ್ಲಿ ಗಜಹಿ ಗನ್ ಎಂದು ಕರೆಯಲಾಗುವುದು. ಇದನ್ನು ಬ್ರಟಿಷ್ ಆಡಳಿತ ಸಮಯದಲ್ಲಿ ಬಳಕೆ ಮಾಡಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತಿರುಪತಿ ಲಡ್ಡು ಕಲಬೆರಕೆ ಆರೋಪದ ಬಗ್ಗೆ ಸಿಬಿಐ ತನಿಖೆ ಕೋರಿದ್ದ ಪಿಐಎಲ್ ವಜಾ