ಕೊಪ್ಪಳ: ಕೊರೊನಾ ಲಾಕ್ಡೌನ್ ಇದೀ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡೋ ಸಾಧ್ಯತೆ ಇದೆ. ಎಲ್ಲಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿರುವ ಕೋವಿಡ್-19 ನೇಕಾರ ಉದ್ಯಮವನ್ನೇ ನಂಬಿಕೊಂಡಿರುವ ಕಾರ್ಮಿಕರು ಹಾಗೂ ಸೀರೆ ತಯಾರಕರ ಬದುಕನ್ನು ಬೀದಿಗೆ ದೂಡಿದೆ.
ನಗರದ ಭಾಗ್ಯನಗರ ಪಟ್ಟಣದಲ್ಲಿ ನೇಕಾರ ಉದ್ಯಮ ಹೆಚ್ಚಾಗಿ ನಡೆಯುತ್ತದೆ. ಆದರೆ ಕಳೆದೊಂದು ತಿಂಗಳಿಂದ ಯಾವುದೇ ಕಾರ್ಯ ಚಟುವಟಿಕೆಗಳು ನಡೆಯದೆ ಬಂದ್ ಆಗಿದೆ. ಮಾಲೀಕರು ಸೇರಿದಂತೆ ಕಾರ್ಮಿಕರು ಪರದಾಡುವಂತಾಗಿದೆ. ಇಲ್ಲಿ ತಯಾರಿಸುವ ಸೀರೆಗಳಿಗೆ ರಾಜ್ಯ ಸೇರಿದಂತೆ ನೆರೆಯ ಆಂಧ್ರ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದರೆ ಲಾಕ್ಡೌನ್ನಿಂದ ಯಾವುದೇ ಸಂಚಾರದ ವ್ಯವಸ್ಥೆಯಿಲ್ಲದೆ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ತಯಾರು ಮಾಡಿರುವ ಸೀರೆಗಳು ಮಾರಾಟವಾಗದೆ ಹಾಗೆ ಉಳಿದಿವೆ.
ಪಟ್ಟಣದಲ್ಲಿ ಒಟ್ಟು 2,500 ಮಗ್ಗಗಳಿದ್ದು, ರೇಷ್ಮೆ ಸೇರಿದಂತೆ ಕಾಟನ್ ಸೀರೆಗಳನ್ನು ಸಿದ್ಧಪಡಿಸಲಾಗುತ್ತದೆ. ಸೀರೆ ಉತ್ಪಾದನೆ ಒಂದು ಚೈನ್ ಲಿಂಕ್ ವ್ಯವಸ್ಥೆಯಲ್ಲಿ ನಡೆಯುತ್ತದೆ. 5 ರಿಂದ 6 ಹಂತದಲ್ಲಿ ಒಂದು ಸೀರೆ ಉತ್ಪಾದನೆಯಾಗುತ್ತದೆ. ಈ ಎಲ್ಲಾ ಹಂತದಲ್ಲಿ ವಿವಿಧ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸವಿಲ್ಲದೆ ಪರದಾಡುವಂತಾಗಿದೆ.
ಭಾಗ್ಯನಗರದಲ್ಲಿ ಸುಮಾರು 5 ಕೋಟಿ ರೂ.ಗೂ ಅಧಿಕ ಮೌಲ್ಯದ ಸೀರೆಗಳು ಸಂಗ್ರಹವಿದೆ. ಇದನ್ನು ಹೇಗೆ ಮಾರಾಟ ಮಾಡಬೇಕೆಂದು ತಿಳಿಯುತ್ತಿಲ್ಲ. ನಮ್ಮ ಸಮಸ್ಯೆಗೆ ಸರ್ಕಾರ ಪರಿಣಾಮ ನೀಡಬೇಕು ಎಂದು ಭಾಗ್ಯನಗರ ಪವರ್‌ಲೂಮ್ಸ್ ಜವಳಿ ಉತ್ಪಾದಕರ ಸಂಘದ ಕಾರ್ಯದರ್ಶಿ ಮಾರುತಿ ಮೇಘರಾಜ್ ಮನವಿ ಮಾಡಿಕೊಂಡರು.