ಕೊಪ್ಪಳ: ಪ್ರತಿಯೊಂದು ಕ್ಷೇತ್ರದ ಮೇಲೂ ಕೊರೊನಾ ಕರಿನೆರಳು ಬಿದ್ದಿದ್ದು, ಕೊರೊನಾದಿಂದ ನಗರದಲ್ಲಿರುವ ಹೋಟೆಲ್ಗಳು ಮತ್ತು ಚಿತ್ರಮಂದಿರಗಳು ನಷ್ಟ ಅನುಭವಿಸುತ್ತಿವೆ.
ಕೊರೊನಾ ನಿಯಂತ್ರಣ ಮಾಡಲು ಸರ್ಕಾರ ಲಾಕ್ಡೌನ್ ವಿಸ್ತರಣೆ ಮಾಡಿದೆ. ಇದರ ಪರಿಣಾಮ ಕೂಲಿ ಕಾರ್ಮಿಕರು, ರೈತರು, ಬಡಜನರು ಎಲ್ಲರೂ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿರುವ ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸ್ಥಿತಿ ಕೂಡ ಇದೇ ಆಗಿದೆ.
ಜಿಲ್ಲೆಯಲ್ಲಿ ಸುಮಾರು 24 ಚಿತ್ರಮಂದಿರಗಳಿದ್ದು, ಪ್ರತಿಯೊಂದರಲ್ಲೂ 8ರಿಂದ 10 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೊರೊನಾದಿಂದ ಇಡೀ ದೇಶವೇ ಲಾಕ್ಡೌನ್ ಇರುವುದರಿಂದ ಚಿತ್ರಮಂದಿರಗಳು ಬಾಗಿಲು ಹಾಕಿಕೊಂಡಿವೆ. ಪರಿಣಾಮ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಷ್ಟಕ್ಕೆ ಸಿಲುಕುವಂತಾಗಿದೆ. ಕೇವಲ ಕಾರ್ಮಿಕರು ಅಷ್ಟೇ ಅಲ್ಲದೆ ಚಿತ್ರಮಂದಿರದ ಮಾಲೀಕರಿಗೂ ಕಷ್ಟ ಎದುರಾಗಿದೆ.
ಚಿತ್ರಮಂದಿರಗಳು ಬಂದ್ ಆಗಿದ್ದರಿಂದ ಆದಾಯವಿಲ್ಲ. ನಮ್ಮ ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮಾನವೀಯತೆ ದೃಷ್ಟಿಯಿಂದ ನಮ್ಮ ಕೈಲಾದ ನೆರವನ್ನು ನೀಡಿದ್ದೇವೆ. ಕೊರೊನಾ ಎಫೆಕ್ಟ್ ಚಿತ್ರಮಂದಿರಗಳಿಗೂ ತಾಗಿದ್ದು, ಸರ್ಕಾರ ನೆರವಿಗೆ ಬರಬೇಕು ಎಂದು ಲಕ್ಷ್ಮಿ ಹಾಗೂ ಶಿವ ಚಿತ್ರಮಂದಿರದ ಮಾಲೀಕ ವಿಶ್ವನಾಥ್ ಮಹಾಂತಯ್ಯನಮಠ ಮನವಿ ಮಾಡಿಕೊಂಡರು.
ಲಾಸ್ನಲ್ಲಿ ಹೋಟೆಲ್ ಉದ್ಯಮ:
ಹೋಟೆಲ್ ಉದ್ಯಮ ನಡೆಸುವವರ ಬದುಕು ಸಹ ಸಂಕಷ್ಟದಲ್ಲಿದ್ದು, ನಷ್ಟದ ಕೂಪದಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ ದೊಡ್ಡ ಹೋಟೆಲ್ ಉದ್ಯಮ ಅಷ್ಟೊಂದು ಇಲ್ಲವಾದರೂ ಸಾವಜಿ ಖಾನಾವ ಇಲ್ಲಿ ಫೇಮಸ್ಸು. ಕೊಪ್ಪಳ ಮತ್ತು ಭಾಗ್ಯನಗರ ಪಟ್ಟಣ ಸೇರಿದಂತೆ ವಿವಿಧೆಡೆ 50 ಸಾವಜಿ ಖಾನಾವಳಿಗಳಿದ್ದು, ಗ್ರಾಹಕರಿಲ್ಲದೆ4 ನಷ್ಟ ಅನುಭವಿಸುತ್ತಿವೆ.