ಕೊಪ್ಪಳ : ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಜನರಲ್ಲಿ ಆತಂಕ ಹೆಚ್ಚಾಗಿದೆ. ಕೊಪ್ಪಳದಲ್ಲಿ ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಝೋನ್ ಅಥವಾ ಸೀಲ್ಡೌನ್ ಪ್ರದೇಶಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಕುರಿತು ಜನ ಏನಂತಾರೆ? ಅಧಿಕಾರಿಗಳು ಏನು ಹೇಳುತ್ತಾರೆ? ಈ ಕುರಿತ ಸ್ಪೆಷಲ್ ಸ್ಟೋರಿ ಇಲ್ಲಿದೆ ನೋಡಿ..
ಸೋಂಕು ಕಾಣಿಸಿದ ಪ್ರದೇಶದ ಸ್ವಚ್ಛತೆ, ನಿವಾಸಿಗಳ ಹಾಜರಾತಿ, ಆರೋಗ್ಯ ತಪಾಸಣೆ, ಸೋಂಕು ನಿವಾರಕ ಔಷಧಗಳ ಸಿಂಪಡಣೆ ಸೇರಿ ಅನೇಕ ಕ್ರಮಗಳನ್ನು ಜರುಗಿಸಲಾಗುತ್ತದೆ. ಈ ಎಲ್ಲ ಕ್ರಮಗಳನ್ನು ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತ್‌ಗಳ ಮೂಲಕ ಜರುಗಿಸಲು ಜಿಲ್ಲಾಡಳಿತ ಸೂಚಿಸುತ್ತದೆ. ಸೋಂಕಿತನ ಮನೆಗೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತದೆ. ಅದಾದ ಬಳಿಕ ಸೋಂಕಿತ ವ್ಯಕ್ತಿಯ ಮನೆಯ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ಡಿಸ್ಪೋಸ್ ಮಾಡಲಾಗುತ್ತದೆ ಎನ್ನುತ್ತಾರೆ ಕೊಪ್ಪಳ ನಗರಸಭೆ ಆಯುಕ್ತ ಮಂಜುನಾಥ್.
ಕೊಪ್ಪಳದ ಬಿ ಟಿ ಪಾಟೀಲ್ ನಗರದಲ್ಲಿ ಕೊರೊನಾ ಕಾಣಿಸಿದ ಕಾರಣ, ಅಲ್ಲಿ ಸೀಲ್ಡೌನ್ ಮಾಡಲಾಗಿತ್ತು. ಈಗ 28 ದಿನಗಳ ಬಳಿಕ ಅದನ್ನು ತೆರವುಗೊಳಿಸಲಾಗಿದೆ. ಸದ್ಯ ಅಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಸೀಲ್ಡೌನ್ ಆದ ನಾಲ್ಕಾರು ದಿನ ಬೆಳಗ್ಗೆ ಮತ್ತು ಸಂಜೆ ಒಂದು ಟ್ಯಾಂಕರ್ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡುತ್ತಿದ್ದರು. ಬಳಿಕ ಅಂತಹ ಗಂಭೀರತೆ ಬರಲಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಮರಿಶಾಂತವೀರ ಶೆಟ್ಟರ್.
ಹಸಿರು ಜಿಲ್ಲೆಯಾಗಿದ್ದ ಕೊಪ್ಪಳದಲ್ಲಿ ಈಗ (ಜೂನ್ 30 ರವರೆಗೆ) 84 ಕೊರೊನಾ ಪ್ರಕರಣ ಪತ್ತೆಯಾಗಿವೆ. ಗಂಗಾವತಿ ತಾಲೂಕಿನಲ್ಲಿ 35 (ಕನಕಗಿರಿ+ಕಾರಟಗಿ), ಕೊಪ್ಪಳ ತಾಲೂಕಿನಲ್ಲಿ 20, ಯಲಬುರ್ಗಾದಲ್ಲಿ 14 ಹಾಗೂ ಕುಷ್ಟಗಿಯಲ್ಲಿ 15 ಪ್ರಕರಣ ಪತ್ತೆಯಾಗಿವೆ.