ಕುಷ್ಟಗಿ(ಕೊಪ್ಪಳ): ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಶುಕಮುನಿ ತಾತಾನವರ ಆರಾಧನಾ ಮಹೋತ್ಸವದಲ್ಲಿ ಅಡ್ಡಪಲ್ಲಕ್ಕಿ ಹೊತ್ತವರ ರಾದ್ದಾಂತ ಇದೀಗ ಕೊರಾನಾ ಆತಂಕವಾಗಿ ತಿರುವು ಪಡೆದುಕೊಂಡಿದೆ.
ಕಳೆದ ಗುರುವಾರ ರಾತ್ರಿ ದೇವಸ್ಥಾನ ಒಳಾಂಗಣದಲ್ಲಿ ಕೋವಿಡ್ ಮಾರ್ಗಸೂಚಿ ಅನ್ವಯ ತಾಲೂಕು ಆಡಳಿತದ ಪ್ರದಕ್ಷಿಣೆ ಅವಕಾಶದ ಹೊರತಾಗಿಯೂ ಸಾವಿರ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಡ್ಡಪಲ್ಲಕ್ಕಿ ದೇವಸ್ಥಾನದಿಂದ ಶೆಟ್ರಸ್ ಮುರಿದು ಹೊರಬರುವ ವೇಳೆ ಅಡ್ಡಪಲ್ಲಕ್ಕಿ ಹೊತ್ತ ಉದ್ರಿಕ್ತರ ವೀರಾವೇಶ ಒಂದೆಡೆಯಾದರೆ, ನಿಯಂತ್ರಿಸಲು ಕೆಲವರು ಯತ್ನಿಸುವ ವೇಳೆ ಸಾಮಾಜಿಕ ಅಂತರ, ಮಾಸ್ಕ ಧರಿಸಿರಲಿಲ್ಲ.
ಶುಕ್ರವಾರ ಈ ಪ್ರಕರಣದ ಹಿನ್ನೆಲೆ ಬಂಧಿತ 50 ಜನರ ಪೈಕಿ 5 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೊದಲೇ ದೋಟಿಹಾಳ , ಕೇಸೂರು ಅವಳಿ ಗ್ರಾಮಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ದೃಢವಾಗುತ್ತಿವೆ. ಈ ಅಂಶವನ್ನು ಮರೆತು ಜನ ದೇವಸ್ಥಾನದ ಒಳಗೆ, ಹೊರಗೆ ಜಮಾಯಿಸಿರುವುದು ಇದೀಗ ಕೊರೊನಾತಂಕ ಇನ್ನೂ ಹೆಚ್ಚು ಮಾಡಿದೆ.