ಗಂಗಾವತಿ: ''ಈ ಭಾಗದ ಶಾಸಕರು, ಸದನದಲ್ಲಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಿತ್ತು. ಆದರೆ, ಕೇವಲ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್ಗಳ ಕುರಿತು ಮಾತನಾಡಿದ್ದಾರೆ'' ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಲಿ ಶಾಸಕ ಜಿ.ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '' ಗಂಗಾವತಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ಅಲಕ್ಷ್ಯ ಮಾಡಿದ್ದಾರೆ. ಶಾಸಕರು ಕೇವಲ ರೆಸಾರ್ಟ್ಗಳಿಗೆ ಸೀಮಿತವಾದಂತೆ ಕಾಣುತ್ತಿದೆ. ಅವರಿಗೆ ಕ್ಷೇತ್ರದ, ಜನರ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲದೇ ಇರುವುದು ಕಾಣುತ್ತೆ. ಸದನದಲ್ಲಿ ರೆಸಾರ್ಟ್ಗಳ ಜೊತೆಗೆ ಮಳೆ ಕೊರತೆ, ಬತ್ತಿರುವ ಜಲಾಶಯದ ಬಗ್ಗೆ ಗಮನಹರಿಸಿ ಸರ್ಕಾರದ ಗಮನಸೆಳೆಯಬೇಕಿತ್ತು. ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಹಾಗೂ ರೈತರ ಜ್ವಲಂತ ಸಮಸ್ಯೆಗಳ ಕುರಿತು ಮಾತನಾಡಬೇಕಾಗಿತ್ತು. ರೆಸಾರ್ಟ್ಗಳ ಬಗ್ಗೆ ಶಾಸಕರಿಗೆ ಇಷ್ಟು ಏಕೆ ಆಸಕ್ತಿಯಿದೆ'' ಎಂದು ಪರಣ್ಣ ಮುನವಳ್ಳಿ ಪ್ರಶ್ನಿಸಿದರು.
ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು: ''ಕಿಷ್ಕಿಂದೆಯ ಭಾಗದಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಸದನದಲ್ಲಿ ಹೇಳಿಕೆ ನೀಡಿರುವುದು ಸರಿಯಲ್ಲ. ಇದರಿಂದ ಈ ಭಾಗದ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳುತ್ತದೆ'' ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಆಕ್ಷೇಪ ವ್ಯಕ್ತಪಡಿಸಿದರು.
''ರಾಯರೆಡ್ಡಿ ಹೇಳಿಕೆ ಪ್ರಕಾರ ಡ್ರಗ್ಸ್ ಮಾಫಿಯಾ ಇದೆ ಅಂದ್ರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕುರಿತು ಸಂಬಂಧಿತ ಇಲಾಖೆಗೆ ತಮ್ಮದೇ ಸರ್ಕಾರದ ಮೂಲಕ ಶಾಸಕ ರಾಯರೆಡ್ಡಿ ಒತ್ತಡ ತರಬಹುದಿತ್ತು. ಅದು ಬಿಟ್ಟು ಬಹಿರಂಗ ಹೇಳಿಕೆ ನೀಡಿರುವುದು ಸರಿಯಲ್ಲ'' ಎಂದು ಮಾಜಿ ಶಾಸಕ ಪರಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಹೆಚ್.ಆರ್. ಶ್ರೀನಾಥ್ ಅಸಮಾಧಾನ: ''ಪವಿತ್ರ ಧಾರ್ಮಿಕ ತಾಣ ಅಂಜನಾದ್ರಿ ಒಳಗೊಂಡಂತೆ ಇರುವ ಕಿಷ್ಕಿಂದೆ ಪ್ರದೇಶ ಡ್ರಗ್ಸ್ ಮಾಫಿಯಾಕ್ಕೆ ಹೋಲಿಕೆ ಮಾಡಿರುವ ಶಾಸಕ ಬಸವರಾಜ ರಾಯರೆಡ್ಡಿ ಒಬ್ಬ ಮಾನಸಿಕ ರೋಗಿ ಆಗಿದ್ದಾರೆ'' ಎಂದು ಮಾಜಿ ಶಾಸಕ ಹೆಚ್.ಆರ್ ಶ್ರೀನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ''ರಾಯರೆಡ್ಡಿ ಹಿರಿಯ ರಾಜಕಾರಣಿ ಎಂದು ನಾವು ಭಾವಿಸಿದ್ದೆವು. ಆದರೆ, ಹನುಮನ ಹುಟ್ಟಿ ಸ್ಥಳ ಕಿಷ್ಕಿಂದೆೆಯ ಬಗ್ಗೆ ನೀಡಿರುವ ಹೇಳಿಕೆ ಗಮನಿಸಿದರೆ, ಅವರು ಮಾನಸಿಕ ಆಸ್ಪತ್ರೆಯ ರೋಗಿಯ ರೀತಿ ವರ್ತಿಸಿದ್ದಾರೆ. ಅಂಜನಾದ್ರಿ ಸುತ್ತಮುತ್ತಲಿನ ಪರಿಸರದ ಕುರಿತು ಪೂರ್ವಾಪರ ತಿಳಿಯದೇ ರಾಯರೆಡ್ಡಿ ನೀಡಿರುವ ಹೇಳಿಕೆಯಿಂದ ಗಂಗಾವತಿ ಭಾಗದ ಜನರನ್ನು ಅವಮಾನ ಕಾಣುವಂತಾಗಿದೆ. ರಾಯರೆಡ್ಡಿ ಅವರು ಬಹುಶಃ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ ಅಂತ ಕಾಣಬಹುದು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ನಾಗರಕಟ್ಟೆ ಪೂಜೆಗೆ ಅನುಮತಿ ವಿಚಾರದಲ್ಲಿ ಆಡಳಿತ ಪ್ರತಿ ಪಕ್ಷದ ನಡುವೆ ಜಟಾಪಟಿ: ಸದನದ ಬಾವಿಗಿಳಿದು ಧರಣಿ ನಡೆಸಿದ ಬಿಜೆಪಿ