ಕೊಪ್ಪಳ: ಕಾಂಗ್ರೆಸ್‌ನವರಿಗೆ ಬುದ್ಧಿ ಇಲ್ಲ. ಅಪಪ್ರಚಾರ ಮಾಡುವುದೇ ಅವರ ಕೆಲಸ. ಅರ್ಧಂಬರ್ಧ ತಿಳಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಯಲಬುರ್ಗಾ ಆಸ್ಪತ್ರೆಯ ಸಿಟಿ ಸ್ಕ್ಯಾನ್ ಅನುದಾನ ಬೇರೆಡೆ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಇಡೀ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನ್ ಖರೀದಿ ಮಾಡುತ್ತಿದ್ದಾರೆ. ಇದು ಸರ್ಕಾರದ ಮಟ್ಟದಲ್ಲಿ ನಡೆದಿದೆ. ಈ ನಡುವೆ ಕೆಕೆಆರ್‌ಡಿಬಿ ಅನುದಾನದಲ್ಲಿ ಸಿಟಿ ಸ್ಕ್ಯಾನ್ ಖರೀದಿ ಪ್ರಕ್ರಿಯೆ ನಡೆದಿತ್ತು. ಇದರಿಂದ ಅನುದಾನ ಬೇರೆ ಕಡೆ ಬಳಕೆ ಮಾಡಲಾಗುತ್ತಿದೆ. ಈ ಅನುದಾನ ಮತ್ತೇನು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ನವರು ಅರ್ಧಂಬರ್ಧ ತಿಳಿದುಕೊಂಡು ಅಪಪ್ರಚಾರ ಮಾಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.
'ಪುನೀತ್‌ಗೆ ಪದ್ಮಶ್ರೀ ಬಗ್ಗೆ ಹಿರಿಯರು ತೀರ್ಮಾನಿಸುತ್ತಾರೆ':
ಪುನೀತ್ ರಾಜಕುಮಾರ್‌ಗೆ ಪದ್ಮಶ್ರೀ ನೀಡುವ ವಿಚಾರಕ್ಕೆ ಸಂಬಂಧ ಮಾತನಾಡಿದ ಸಚಿವರು, ಸರ್ಕಾರ 12 ದಿನ ಹೇಗೆ ನಡೆದುಕೊಂಡಿದೆ ಎಂದು ಜನರಿಗೆ ಗೊತ್ತಿದೆ. ಪುನೀತ್ ಅವರಿಗೆ ಪದ್ಮಶ್ರೀ ಕೊಡುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ಹಿರಿಯರು ತೀರ್ಮಾನ ಕೈಗೊಳ್ಳುವರು ಎಂದರು.
'ಹಳ್ಳದ 1 ಟನ್ ಮರಳಿಗೆ 300 ರೂ.'
ಮರಳು ನೀತಿ ಸರಳೀಕರಣ ಕುರಿತಂತೆ ನಿನ್ನೆಯಷ್ಟೇ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗಿದೆ. ಮೂರು ಶ್ರೇಣಿಯಲ್ಲಿ ಮರಳು ಗಣಿ ಲೀಜ್‌ಗೆ ಕೊಡಲಾಗುವುದು. ಹಳ್ಳದಲ್ಲಿ 300 ರೂ.ಗೆ ಒಂದು ಟನ್ ನೀಡಲು ತೀರ್ಮಾನಿಸಲಾಗಿದೆ. ಉಳಿದಂತೆ ನದಿ ಪಾತ್ರ ಮತ್ತು ಹಿನ್ನೀರಿನಲ್ಲಿ 700 ರೂ. ನಿಗದಿ ಮಾಡಲಾಗಿದೆ. ಗ್ರಾಹಕರು ಆ್ಯಪ್‌ನಲ್ಲಿ ಬೇಡಿಗೆ ಇಡಬೇಕು. ಅಲ್ಲಿಂದ ಗ್ರಾಹಕರಿಗೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಸಚಿವ ಹಾಲಪ್ಪ ಆಚಾರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.