ಕೊಪ್ಪಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೊಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 66 ಸಾಧಕರನ್ನು ಆಯ್ಕೆ ಮಾಡಿದೆ. ಅದರಲ್ಲಿ 2 ಪ್ರಶಸ್ತಿಗಳು ಜಿಲ್ಲೆಗೆ ಲಭಿಸಿವೆ.
ಗಂಗಾವತಿ ಬೀಚಿ ಎಂದೇ ಖ್ಯಾತಿ ಪಡೆದಿರುವ ಹಾಸ್ಯ ಭಾಷಣಕಾರ ಬಿ. ಪ್ರಾಣೇಶ್ ಹಾಗೂ ಕಲಾವಿದ ವೆಂಕಣ್ಣ ಚಿತ್ರಗಾರಗೆ ಪ್ರಶಸ್ತಿ ಒಲಿದು ಬಂದಿದೆ. ಇದು ಜಿಲ್ಲೆಯ ಜನರಲ್ಲಿ ಸಂತಸ ಉಂಟು ಮಾಡಿದೆ.
ಶಿಲ್ಪಕಲೆಯಲ್ಲಿ ವೆಂಕಣ್ಣನವರಿಗೆ ಹಾಗೂ ಸಂಕೀರ್ಣ ಕ್ಷೇತ್ರದಲ್ಲಿ ಪ್ರಾಣೇಶ್ಗೆ ಪುರಸ್ಕಾರ ನೀಡಲಾಗುತ್ತಿದೆ. ಈ ಕುರಿತಂತೆ ಇಬ್ಬರು ಸಾಧಕರು ಸಂತಸ ಹಂಚಿಕೊಂಡಿದ್ದಾರೆ.
ನನ್ನ 30 ವರ್ಷಗಳ ಸಾಹಿತ್ಯ ಸೇವೆ ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ಕನ್ನಡ ಜನತೆಗೆ ಸಂದಿದೆ.
ಸಣ್ಣ ವಯಸ್ಸಿನಲ್ಲಿ ಪ್ರಶಸ್ತಿ ಬಂದರೆ ಹೆಚ್ಚಿನ ಸೇವೆ ಸಲ್ಲಿಸಲು ಸಹಕಾರವಾಗುತ್ತದೆ. ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಸರ್ಕಾರಕ್ಕೆ ಹಾಸ್ಯ ಭಾಷಣಗಾರ ಬಿ.ಪ್ರಾಣೇಶ್ ಅಭಿನಂದನೆ ಸಲ್ಲಿಸಿದರು.
ಇದು ನಮ್ಮ ಅಪ್ಪ, ಅಜ್ಜನ ಕಾಲದಿಂದಲೂ ನಡೆದುಕೊಂಡು ಬಂದಿರುವ ಕಲೆಯಾಗಿದೆ. ಸರ್ಕಾರ ನಮ್ಮ ಕಲೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಸಂತೋಷ ತಂದಿದೆ. ನಾನು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಲಾವಿದ ವೆಂಕಣ್ಣ ಚಿತ್ರಗಾರ ಹೇಳಿದರು.