ಕೊಪ್ಪಳ: ಹುಬ್ಬಳ್ಳಿ ರಾಮ ಜನ್ಮಭೂಮಿ ಗಲಾಟೆ ವಿಷಯವಾಗಿ ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಇದರಲ್ಲಿ ಯಾವುದೇ ದ್ವೇಷ ರಾಜಕಾರಣವಿಲ್ಲ. ತಪ್ಪು ಮಾಡಿದವರನ್ನು ಏನು ಮಾಡಬೇಕು? ಅವರನ್ನು ಸುಮ್ನೆ ಬಿಟ್ಬಿಡಬೇಕಾ? ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕೊಪ್ಪಳದ ಬಸಾಪುರ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 30 ವರ್ಷಗಳ ಹಿಂದಿನ ಬಾಕಿ ಉಳಿದಿರುವ ಪ್ರಕರಣಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಪೊಲೀಸರು ಹಲವು ಪ್ರಕರಣಗಳಲ್ಲಿ ಭಾಗಿಯಾದವರನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ ಎಂದರು.
ಅತಿಥಿ ಶಿಕ್ಷಕರ ಸೇವೆ ಕಾಯಂ ಕಷ್ಟ: ಅತಿಥಿ ಉಪನ್ಯಾಸಕರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇವೆ. ಪ್ರತಿಭಟನೆ ವಾಪಸ್ ಪಡೆಯಲು ಮನವಿ ಮಾಡಿದ್ದೇವೆ. ಆದರೂ ಪಾದಯಾತ್ರೆ ಮಾಡುತ್ತಿದ್ದಾರೆ. ಸೇವೆ ಕಾಯಂ ಮಾಡುವಂತೆ ಅವರ ಬೇಡಿಕೆ ಇದೆ. ಕಾನೂನು ತೊಡಕಿನಿಂದ ಸೇವೆ ಖಾಯಂ ಮಾಡುವುದು ಕಷ್ಟ ಸಾಧ್ಯ ಎಂದು ತಿಳಿಸಿದರು.
ರಾಮಮಂದಿರ ಉದ್ಘಾಟನೆಗೆ ರಜೆ ಘೋಷಣೆಗೆ ಬಿಜೆಪಿ ಒತ್ತಾಯ ವಿಚಾರಕ್ಕೆ, ಕೇಂದ್ರ ಸರ್ಕಾರ ರಜೆ ಘೋಷಣೆ ಮಾಡಲಿ. ನಾವೇಕೆ ರಜೆ ನೀಡಬೇಕು ಎಂದರು. ಬರ ಹಿನ್ನೆಲೆಯಲ್ಲಿ ತಾತ್ಕಾಲಿಕ 2 ಸಾವಿರ ರೂ ಪರಿಹಾರ ನೀಡುವಲ್ಲಿ ವಿಳಂಬ ವಿಚಾರಕ್ಕೆ ಪ್ರತ್ರಿಕ್ರಿಯಿಸಿ, ತಾಂತ್ರಿಕ ಸಮಸ್ಯೆ ಕಾರಣ ಬರ ಪರಿಹಾರ ವಿತರಣೆ ಆಗಿಲ್ಲ. ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು. ರೈತರ ಬ್ಯಾಂಕ್ ಖಾತೆ ಮತ್ತು ಜಮೀನು ವಿವರಗಳ ಹೊಂದಾಣಿಕೆ ಸಮಸ್ಯೆ ಆಗಿದೆ. ಶೀಘ್ರವೇ ಕ್ರಮ ಕೈಗೊಂಡು ಪರಿಹಾರ ನೀಡಲು ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ: ಇಂದಿನಿಂದ 2 ದಿನ ಮೋದಿ ದಕ್ಷಿಣ ಭಾರತ ಪ್ರವಾಸ: ಕೇರಳ, ತಮಿಳುನಾಡು, ಲಕ್ಷದ್ವೀಪಕ್ಕೆ ಭೇಟಿ