ಕುಷ್ಟಗಿ (ಕೊಪ್ಪಳ): ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕ ವರ್ಗಕ್ಕೆ ಪೂರ್ಣ ಪ್ರಮಾಣದ ವೇತನ ಪಾವತಿ ಹಾಗೂ ಕೆಲಸಕ್ಕಾಗಿ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಗ್ರೇಡ್-2 ತಹಸೀಲ್ದಾರ್ ವಿಜಯಾ ಮುಂಡರಗಿ ಅವರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಅಧ್ಯಕ್ಷೆ ಕಲಾವತಿ ಮೆಣೆದಾಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ತಹಶೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾರ್ಮಿಕ ವರ್ಗಕ್ಕೆ ಇನ್ನೂ 6 ತಿಂಗಳ ಆಹಾರ ಧಾನ್ಯ ವಿತರಿಸಬೇಕು. ಕೊರೊನಾ ಸಂದರ್ಭದಲ್ಲಿ ಫ್ರಂಟಲ್ ಲೈನ್ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಕಾರ್ಮಿಕರ ಹುದ್ದೆಯನ್ನು ಖಾಯಂ ಮಾಡಬೇಕು. ಕೋವಿಡ್-19 ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಕಾನೂನು ಸುವ್ಯವಸ್ಥೆಯ ವಿಷಯವಾಗಿ ಪರಿಗಣಿಸದಿರಿ ಎಂದು ಹಕ್ಕೋತ್ತಾಯ ಮಂಡಿಸಿದರು.
ಈ ವೇಳೆ ಹಮಾಲರ ಸಂಘದ ಅಧ್ಯಕ್ಷ ಹನಮಂತಪ್ಪ ಸಿಡ್ಲಭಾವಿ, ಯಲ್ಲಪ್ಪ ಮೆಣೆದಾಳ ಮತ್ತಿತರಿದ್ದರು.