ಕುಷ್ಟಗಿ: ಬಾಲ್ಯ ಸ್ನೇಹಿತರಿಬ್ಬರು ಒಂದೇ ದಿನ ಸೇವಾ ನಿವೃತ್ತಿ ಹೊಂದುವ ಮೂಲಕ ತಮ್ಮ ಸುಧೀರ್ಘ ಸಮಯದ ಗೆಳೆತನಕ್ಕೆ ಸಾಕ್ಷಿಯಾದ ಅಪರೂಪದ ಪ್ರಸಂಗ ತಾಲೂಕಿನಲ್ಲಿ ಜರುಗಿದೆ.
ತಾಲೂಕಿನ ಗುಮಗೇರಾ ಗ್ರಾಮದ ಬಿ.ಎಂ. ಕಂಬಳಿ ಹಾಗೂ ದೊಡ್ಡಪ್ಪ ಸಂಗನಾಳ ಬಾಲ್ಯ ಸ್ನೇಹಿತರು. ಪ್ರಾಥಮಿಕ ಶಿಕ್ಷಣವನ್ನು ಗುಮಗೇರದಲ್ಲಿ, ಹೈಸ್ಕೂಲ್ ಶಿಕ್ಷಣವನ್ನು ಕುಷ್ಟಗಿಯಲ್ಲಿ ಮಾಡಿದ್ದಾರೆ. ನಂತರ ಪದವಿ ಶಿಕ್ಷಣವನ್ನು ಇಬ್ಬರು ಸಿಂಧನೂರಿನಲ್ಲಿ ಮುಗಿಸಿದ್ದಾರೆ.
ಬಿ.ಎಂ. ಕಂಬಳಿ ಅವರು ರಾಜ್ಯಶಾಸ್ತ್ರ ಆಯ್ಕೆ ಮಾಡಿಕೊಂಡರೆ, ದೊಡ್ಡಪ್ಪ ಸಂಗನಾಳ ಅವರು ಇತಿಹಾಸ ಆಯ್ಕೆ ಮಾಡಿಕೊಂಡಿದ್ದರು. ವಿಶೇಷ ಅಂದ್ರೆ ಇಬ್ಬರೂ ಕ್ಲಾಸ್ ಮೇಟ್ ಹಾಗೂ ರೂಮ್ ಮೇಟ್ ಕೂಡ.
2003ರಲ್ಲಿ ಇಬ್ಬರೂ ಒಂದೇ ಬಾರಿಗೆ ಉಪನ್ಯಾಸಕರಾಗಿ ನೇಮಕಾತಿಯಾಗಿದ್ದರು. ನಂತರ ಬಿ.ಎಂ. ಕಂಬಳಿ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ದೊಡ್ಡಪ್ಪ ಸಂಗನಾಳ ಅವರು ತಾವರಗೇರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆಯಲ್ಲಿದ್ದರು. ಮೇ 31 ರಂದು ಈ ಇಬ್ಬರು ಸ್ನೇಹಿತರು ಸೇವಾ ನಿವೃತ್ತಿಯಾಗಿರುವುದು ಗಮನಾರ್ಹ ಎನಿಸಿದೆ.