ಕುಷ್ಟಗಿ (ಕೊಪ್ಪಳ): ಅಣ್ಣನ ಮದುವೆಯಲ್ಲಿ ಅಪ್ರಾಪ್ತೆಯೊಂದಿಗೆ ತಮ್ಮನ ಮದುವೆ ಮಾಡುವ ಮಾಹಿತಿಗೆ ಹನುಮಸಾಗರ ಪೊಲೀಸರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ತಕ್ಷಣ ಸ್ಪಂಧಿಸಿ ವಿವಾಹ ನಿಲ್ಲಿಸಿದ ಘಟನೆ ಕಂಡು ಬಂದಿದೆ.
ಏ.25ರಂದು ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಭವನದಲ್ಲಿ ಕನಕಪ್ಪ ಹಾಗೂ ಶಿಲ್ಪಾ ಅವರ ಮದುವೆ ನಿಗದಿಯಾಗಿತ್ತು. ಸದರಿ ಕಾರ್ಯಕ್ರಮದ ತಯಾರಿ ನಡೆದಿದ್ದು, ಇದೇ ಮದುವೆಯಲ್ಲಿ ವರನ ತಮ್ಮನ ಮದುವೆ ಬದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ 7ನೇ ತರಗತಿ ಓದುತ್ತಿರುವ ಆಪ್ರಾಪ್ರೆಯೊಂದಿಗೆ ನಡೆಸುವ ಸಿದ್ಧತೆ ನಡೆದಿತ್ತು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಬಂದ ಮಾಹಿತಿ ಮೇರೆಗೆ ಹನುಮಸಾಗರ ಪಿಎಸ್ಐ ಅಶೋಕ ಬೇವೂರು ಅವರಿಗೆ ಗೊತ್ತಾಗಿದೆ. ಕೂಡಲೇ ದೌಡಾಯಿಸಿ ವಿಚಾರಣೆ ನಡೆಸಿದರು. ನಿಗದಿಯಾದ ಕನಕಪ್ಪ ಹಾಗೂ ಶಿಲ್ಪಾ ಮದುವೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ 50 ಜನ ಮೀರದಂತೆ ಹಾಗೂ ಈ ಮದುವೆಯ ಜೊತೆಗೆ ಕನಕಪ್ಪನ ಸಹೋದರ ಯಮನಪ್ಪನೊಂದಿಗೆ ಅಪ್ರಾಪ್ತೆಯ ಮದುವೆ ಮಾಡದಂತೆ ಸೂಚಿಸಿದರು. ಬಳಿಕ ವರನ ಪೋಷಕರಿಗೆ ಕಾನೂನು ಪ್ರಕಾರ ಕ್ರಮದ ಎಚ್ಚರಿಕೆ ಸಹ ನೀಡಿದರು.
ವರನ ಪಾಲಕರು ಅಪ್ರಾಪ್ತೆಯೊಂದಿಗೆ ಮದುವೆ ಮಾಡುವುದಿಲ್ಲ. ಕಾನೂನು ಪ್ರಕಾರವೇ ಅಪ್ರಾಪ್ತೆಗೆ 18 ವರ್ಷ ಬಳಿಕ ಮದುವೆ ಮಾಡುವ ಮಾಹಿತಿ ನೀಡಿದ್ದಾರೆ. ಬಾಲಕಿ ಬದಾಮಿ ತಾಲೂಕಿನ ಕುಟಕನಕೇರಿಯಲ್ಲಿದ್ದಾಳೆಂದು ಹನುಮಸಾಗರ ಪಿಎಸ್ವೈ ಅಶೋಕ ಬೇವೂರು ತಿಳಿಸಿದ್ದಾರೆ.