ಗಂಗಾವತಿ/ಕೊಪ್ಪಳ: ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಈ ಕುರಿತಂತೆ ಕೊಪ್ಪಳ ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದ್ದು, 28 ವರ್ಷದ ಮಹಿಳೆಗೆ ಸೋಂಕು ತಗುಲಿರೋದು ದೃಢಪಟ್ಟಿದೆ.
ಈ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6 ಕ್ಕೇರಿದಂತಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೂಲಿ ಕೆಲಸ ಮಾಡುವ ಈ ಮಹಿಳೆ ಕಳೆದ ಹತ್ತು ದಿನಗಳ ಹಿಂದೆ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿದ್ದರು. ಮಹಿಳೆಗೆ ಸೋಂಕು ತಗುಲಿರೋದು ದೃಢವಾಗಿರುವ ಹಿನ್ನೆಲೆಯಲ್ಲಿ ಚಿಕ್ಕಜಂತಕಲ್ ಗ್ರಾಮಕ್ಕೆ ತಹಶೀಲ್ದಾರ್ ಚಂದ್ರಕಾಂತ್, ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಬ್ಯಾರಿಕೇಡ್ ಹಾಕಿ ಗ್ರಾಮವನ್ನ ಸೀಲ್ಡೌನ್ ಮಾಡಿದ್ದಾರೆ.
ಸೋಂಕಿತ ಮಹಿಳೆಯ ಪತಿ, ಇಬ್ಬರು ಮಕ್ಕಳು ಸೇರಿ ಐವರು ಪ್ರಾಥಮಿಕ ಸಂಪರ್ಕಿತರನ್ನು ಹಾಗೂ ನಾಲ್ವರು ದ್ವಿತೀಯ ಸಂಪರ್ಕಿತರನ್ನು ಸದ್ಯಕ್ಕೆ ಪತ್ತೆ ಹಚ್ಚಲಾಗಿದೆ. ಇನ್ನು ಈ ಮಹಿಳೆ ಗಂಗಾವತಿ ತಾಲೂಕು ಆಸ್ಪತ್ರೆ ಹಾಗೂ ಔಷಧ ಅಂಗಡಿಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಸಿಡಿಆರ್ ಮೂಲಕ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.