ಕೊಪ್ಪಳ: ರೈತ ದೇಶದ ಬೆನ್ನೆಲೆಬು ಎಂದು ಹೇಳುತ್ತಾ ಅನ್ನದಾತರ ಬೆನ್ನು ಮುರಿಯುವ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ದೇಶವನ್ನು ಮಾರಾಟ ಮಾಡಲು ಹೊರಟಿದೆ ಎಂದು ಕಾರ್ಮಿಕ ಸಂಘಟನೆ ಮುಖಂಡ ಅರ್.ಎಸ್. ಬಸವರಾಜಪ್ಪ ಆರೋಪಿಸಿದರು.
ಕೃಷಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ವಿರೋಧಿಸಿ ನಡೆಸಲಾದ ಜನಜಾಗೃತಿ ಜಾಥಾದಲ್ಲಿ ಪಾಲ್ಗೊಂಡು, ಬಸ್ ನಿಲ್ದಾಣದ ಬಳಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಕ್ಷಾಂತರ ರೈತರು ದೆಹಲಿಯಲ್ಲಿ 72 ದಿನಗಳಿಂದ ಹೋರಾಟ ನಡೆಸುತ್ತಿದ್ದು, 167 ಜನ ಮೃತರಾಗಿದ್ದಾರೆ. ಸರ್ಕಾರದ ಯಾವುದೇ ಬೆದರಿಕೆಗೆ ಬಗ್ಗದೆ ಅಚಲವಾಗಿ ಹೋರಾಟ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಈವರೆಗೂ ಒಂದೇ ಒಂದು ಬಾರಿ ರೈತರ ಬಗ್ಗೆ ಮಾತನಾಡಿಲ್ಲ.
ಕೇಂದ್ರ ಸರ್ಕಾರದ ಈ ಕಾಯ್ದೆಗಳಿಂದ ರೈತರು, ಕಾರ್ಮಿಕರು ಉಳಿಯುವುದಿಲ್ಲ. ರೈತನ ಬೆನ್ನೆಲುಬು ಮುರಿಯುವ ಕಾಯ್ದೆ ಜಾರಿ ಮಾಡುತ್ತಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರೈತರ, ಕಾರ್ಮಿಕರ, ಜನಸಾಮಾನ್ಯರ ಹಿತ ಬೇಕಾಗಿಲ್ಲ. ಮೋದಿ ಅಂಬಾನಿ, ಅದಾನಿಯ ತಲೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಮಾರಾಟ ಮಾಡಲು ಹೊರಟಿದ್ದಾರೆ ಎಂದು ಹೇಳಿದ ಅವರು, ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.