ಗಂಗಾವತಿ(ಕೊಪ್ಪಳ): ನಗರದ ಕೇಂದ್ರ ಬಸ್ ನಿಲ್ದಾಣದ ಸುತ್ತ ಇರುವ ರಕ್ಷಣಾ ಗೋಡೆಯ ಈಶಾನ್ಯ ಮೂಲೆಯಲ್ಲಿ ನೆಲಕ್ಕುರುಳಿದ್ದು, ಹಂದಿ, ನಾಯಿಗಳು ಸುಲಭವಾಗಿ ಬಸ್ ನಿಲ್ದಾಣದೊಳಕ್ಕೆ ನುಗ್ಗುತ್ತಿವೆ.
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಅಧಿಕಾರಿಗಳು, ಗೋಡೆಯ ಸಮೀಪವಿರುವ ಬೇವಿನಗಿಡದ ಗಾಳಿಗೆ ರಭಸಕ್ಕೆ ಹಾಗೂ ನಿರಂತರವಾಗಿ ಗಿಡದ ಕಾಂಡ ಗೋಡೆಗೆ ಉಜ್ಜಿದ್ದರ ಪರಿಣಾಮ ಗೋಡೆ ಉರುಳಿದೆ ಎಂದು ಪಂಚನಾಮೆ ಬರೆದುಕೊಂಡು ಹೋಗಿದ್ದಾರೆ. ಆದರೆ, ಇದು ಕಿಡಿಗೇಡಿಗಳ ಕೃತ್ಯವೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೇಂದ್ರ ಬಸ್ ನಿಲ್ದಾಣ ಉದ್ಘಾಟನೆಯಾದ ಸಂದರ್ಭದಲ್ಲಿ ಆಗಿನ ಬಿಜೆಪಿ ಮುಖಂಡರೊಬ್ಬರು ತನ್ನ ಮನೆಗೆ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಈಶಾನ್ಯ ದಿಕ್ಕಿನಲ್ಲಿ ಗೋಡೆ ಒಡೆಸಿದ್ದರು. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಅಂದಿನ ಶಾಸಕ ಇಕ್ಬಾಲ್ ಅನ್ಸಾರಿ ಕೂಡಲೇ ಗೋಡೆಯನ್ನು ಮರು ನಿರ್ಮಾಣ ಮಾಡಿಸಿದ್ದರು. ಒಂದು ದಶಕದ ಬಳಿಕ ಮತ್ತೆ ಅದೇ ಜಾಗದಲ್ಲಿ ಗೋಡೆ ಉರುಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.