ಗಂಗಾವತಿ: ಬಿಜೆಪಿ ನಾಯಕರೊಬ್ಬರ ಹಲ್ಲೆಯಿಂದ ತೀವ್ರ ಗಾಯಗೊಂಡು ಆಸ್ಪತ್ರೆ ಪಾಲಾಗಿರುವ ಕಾಂಗ್ರೆಸ್ ಮುಖಂಡರೊಬ್ಬರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ತಾಲೂಕಿನ ಜಂಗಮ ಕಲ್ಗುಡಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ಅಧ್ಯಕ್ಷ ವಿ. ಪ್ರಸಾದ್ ಮೇಲೆ ಅದೇ ಗ್ರಾಮದ ಬಿಜೆಪಿ ಮುಖಂಡ ಮುರಳಿಕೃಷ್ಣ ಎಂಬುವವರು ಟ್ರಾಕ್ಟರ್ ಗುದ್ದಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಘಟನೆಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಸಾದ್ ಚಿಕಿತ್ಸೆ ಪಡೆಯುತ್ತಿದ್ದರೆ, ಅವರ ಮೇಲೆ ಕಲ್ಗುಡಿ ಗ್ರಾಮದ ರಾಮೇಶ್ ಬಸಣ್ಣ ನಾಯಕ್ ಎಂಬುವವರು ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಕಾಮಗಾರಿ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪ್ರಸಾದ್ ಎಂ. ಧನಂಜಯ ಹಾಗೂ ನೆಕ್ಕಂಟಿ ನಾಗೇಶ್ವರ ರಾವ್ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.