ಗಂಗಾವತಿ(ಕೊಪ್ಪಳ): ರಾಜ್ಯದಲ್ಲಿ ಒಮಿಕ್ರಾನ್ ಮತ್ತು ಕೊರೊನಾ ಕಂಟಕ ಎದುರಾಗುತ್ತಿರುವ ಹಿನ್ನೆಲೆ ತಾಲೂಕಿನ ಪ್ರಮುಖ ದೇಗುಲ ಅಂಜನಾದ್ರಿ ದೇಗುಲಕ್ಕೆ ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಕರ ಸಂಕ್ರಮಣದ ಹಿನ್ನೆಲೆ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವ ಸಾವಿರಾರು ಭಕ್ತರು ಸಮೀಪದಲ್ಲಿಯೇ ಇರುವ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆ ಜನ ಸಂದಣಿ ಅಧಿಕವಾಗುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಅಂಜನಾದ್ರಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈಗಾಗಲೇ ಗಂಗಾವತಿಯಲ್ಲಿ ಜ.15ರಂದು ನಡೆಯಲಿದ್ದ ಚನ್ನಬಸವ ಸ್ವಾಮಿ ತಾತನ ಜಾತ್ರೆ, ರಥೋತ್ಸವ, 17ರಂದು ನಡೆಯಬೇಕಿದ್ದ ಗ್ರಾಮ ದೇವತೆಯ ಜಾತ್ರೆ ಮತ್ತು ರಥೋತ್ಸವವನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದಾರೆ.
ಗವಿಮಠದ ಜಾತ್ರೆ ರದ್ದು:

ಇದೇ 19 ರಂದು ನಡೆಯಬೇಕಿದ್ದ ಕೊಪ್ಪಳದ ಪ್ರಸಿದ್ಧ ಶ್ರೀ ಗವಿಮಠದ ಜಾತ್ರೆ ಇದೇ ಮೊದಲ ಬಾರಿಗೆ ರದ್ದುಗೊಂಡಿದೆ. ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಖ್ಯಾತಿ ಪಡೆದಿದ್ದ ಶ್ರೀ ಗವಿಮಠದ ಜಾತ್ರೆಗೆ ಕೊರೊನಾ ಕರಿನೆರಳು ಬಿದ್ದಿದೆ.
ಜನರ ಆರೋಗ್ಯದ ದೃಷ್ಟಿಯಿಂದ ಜಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಸಂಪ್ರದಾಯ ಮುರಿಯದಂತೆ ಮಠದಲ್ಲಿ ಸರಳವಾಗಿ ಧಾರ್ಮಿಕ ವಿಧಿವಿಧಾನಗಳನನ್ನು ಮಾತ್ರ ಆಚರಣೆ ಮಾಡಲಾಗುತ್ತದೆ. ಕೊರೊನಾ ನಿಯಮಗಳ ಪಾಲನೆಯೊಂದಿಗೆ ಗದ್ದುಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಒಂದು ವೇಳೆ ಸೋಂಕು ಉಲ್ಬಣಗೊಂಡರೆ ಶ್ರೀಮಠದಕ್ಕೆ ಭಕ್ತರ ಪ್ರವೇಶ ಸಹ ನಿರ್ಭಂದಿಸುವುದಾಗಿಯೂ ಶ್ರೀಮಠದ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.