ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ತುಳಿಯಲು ಬಿಜೆಪಿಯವರೇ ಸಿದ್ಧವಾಗಿದ್ದಾರೆ. ಯಡಿಯೂರಪ್ಪ ಅವರನ್ನು ಹರಕೆಯ ಕುರಿಯನ್ನಾಗಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಿರೋದು ಮೋದಿ, ಅಮಿತ್ ಶಾ, ಆರ್ಎಸ್ಎಸ್ ಮುಖಂಡರಿಗಾಗಲಿ ಯಾರಿಗೂ ಇಷ್ಟವಿಲ್ಲ. ಆದರೆ, ನಾನು ಸ್ಪಷ್ಟವಾಗಿ ಹೇಳ್ತೇನೆ. ಯಡಿಯೂರಪ್ಪ ಇಲ್ಲಾಂದ್ರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗುತ್ತದೆ. ಯಡಿಯೂರಪ್ಪ ಇನ್ನೆಷ್ಟು ದಿನ ಸಿಎಂ ಆಗಿ ಮುಂದುವರೆಯುತ್ತಾರೋ ಗೊತ್ತಿಲ್ಲ. ಈಗ ಕೇವಲ ಎರಡೂವರೆ ತಿಂಗಳಲ್ಲಿ ನಾನು ತಂತಿ ಮೇಲೆ ನಡೆಯುತ್ತಿದ್ದೇನೆ ಎಂದು ಹೇಳ್ತಿದಾರೆ.
ನಾವ್ಯಾರು ಬಿಜೆಪಿಯನ್ನು ಮುಗಿಸಲ್ಲ. ಆ ಪಕ್ಷದವರೇ ಬಿಜೆಪಿಯನ್ನು ಮುಳುಗಿಸ್ತಾರೆ. ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಅದು ಈಗಾಗಲೇ ಕಂಡು ಬಂದಿದೆ. ಈ ಸನ್ನಿವೇಶವೇ ರಾಜ್ಯದಲ್ಲಿ ಮುಂದುವರೆಯಲಿದೆ. ಇನ್ನು ಮೋದಿ ಅವರ ನಾಟಕದ ಬಗ್ಗೆ ಚಕ್ರವರ್ತಿ ಸೂಲಿಬೇಲಿ ಹಾಗೂ ಅದೇ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್ಗೆ ಗೊತ್ತಾಗಿದೆ. ಈಗಲಾದರೂ ಅವರ ಕಣ್ಣಿನ ಪೊರೆ ಕಳಚಿದೆ. ಅವರನ್ನು ನಾನು ಅಭಿನಂದಿಸುತ್ತೇನೆ ಎಂದರು.
ಎಲ್ಲ ವರ್ಗದ ಜನರ ಸ್ಥಿತಿಗತಿಗಳನ್ನು ಅರಿಯಲು ಜಾತಿ ಗಣತಿ ಮಾಡಿಸಲಾಗಿತ್ತು. ಕೆಲವೊಂದಿಷ್ಟು ಲೋಪದೋಷದ ಹಿನ್ನೆಲೆಯಲ್ಲಿ ಅದನ್ನು ನಮ್ಮ ಸರ್ಕಾರ ಬಹಿರಂಗಪಡಿಸಲಿಲ್ಲ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ನಮ್ಮ ಸರ್ಕಾರ ಗಣತಿ ಮಾಡಿತ್ತು. ಆದರೆ, ನಮ್ಮ ಸರ್ಕಾರ ಬಿದ್ದಿತು. ಈಗ ಬಿಜೆಪಿ ಸರ್ಕಾರವಿದೆ. ಅವರು ಆ ಕೆಲಸವನ್ನು ಮಾಡಲಿ ಎಂದರು.