ಕೊಪ್ಪಳ: ಯಾವುದೇ ಕಾರಣಕ್ಕೂ ವಿನಯ್ ಕುಲಕರ್ಣಿ ಅವರನ್ನು ಬಿಜೆಪಿಗೆ ಕರೆದುಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಕೊಪ್ಪಳದಲ್ಲಿ ಇಂದು ಸಂಜೆ ಬಿಜೆಪಿ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಕೊಲೆಗಡುಕರು ಎಂಬ ಅಂಶದಿಂದ ಸಿಬಿಐ ತನಿಖೆ ನಡೆಯುತ್ತಿದೆ. ಹೇಗಾದರೂ ಮಾಡಿ ಬಿಜೆಪಿಗೆ ಬಂದರೆ ಸಿಬಿಐ ತನಿಖೆಯಿಂದ ರಕ್ಷಣೆ ಪಡೆಯಬಹುದು ಎಂಬ ಕುತಂತ್ರ ರಾಜಕಾರಣವನ್ನು ಅವರು ಮಾಡುತ್ತಿರಬಹುದು. ಅವರು ಕೊಲೆಗಡುಕರು ಅಲ್ಲ ಎಂದು ಸಿಬಿಐ ತನಿಖೆಯಿಂದ ಸಾಬೀತಾದರೆ ಆಗ ಅವರು ಬಿಜೆಪಿ ಸೇರಲು ಬಂದರೆ ಎಲ್ಲರೂ ಸೇರಿ ಒಟ್ಟಿಗೆ ಕುಳಿತುಕೊಂಡು ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದರು.
ಇನ್ನು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಬದಲು ಗೂಂಡಾರಾಜ್ಯ ನಡೆಯುತ್ತಿದೆ. ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಪಶ್ಚಿಮ ಬಂಗಾಳಕ್ಕೆ ಹೋದಾಗ ಅವರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಬಿಜೆಪಿಯಲ್ಲಿ ಪ್ರಭಾವ ಎಲ್ಲೆಲ್ಲಿ ಪ್ರಬಲವಾಗಿದೆ ಬೆಳೆಯುತ್ತಿದೆಯೋ ಅಲ್ಲಿ ಇಂತಹ ಗೂಂಡಾಗಿರಿ ಮೂಲಕ ಬಿಜೆಪಿಯನ್ನು ಧ್ವಂಸಮಾಡುವ ಯತ್ನ ನಡೆಯುತ್ತಿದೆ. ಆದರೆ ಬಿಜೆಪಿ ಅಂತಹ ಕಡೆ ಇನ್ನೂ ಹೆಚ್ಚು ಪ್ರಬಲವಾಗಿ ಬೆಳೆಯುತ್ತದೆ ಎಂದರು.