ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪುರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ತಾ.ಪಂ. ಕಚೇರಿ ಸುತ್ತಲೂ ಪೊಲೀಸರು ಬ್ಯಾರಿಕೇಡ್ ಹಾಕಿ ಭದ್ರತಾ ಕಾರ್ಯ ಮಾಡಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ತಾ.ಪಂ. ವಾಣಿಜ್ಯ ಮಳಿಗೆ ಬಂದ್ ಮಾಡಲಾಗಿದೆ.
ಚುನಾವಣಾ ಕೇಂದ್ರದಿಂದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸ್ಥಳದಲ್ಲಿ ಪೊಲೀಸ್ ಪಹರೆ ಹಾಕಲಾಗಿದೆ. ಮಾರುತಿ ವೃತ್ತದಲ್ಲಿ ವಾಹನ ಸಂಚಾರ, ಜನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.
ಬಿಜೆಪಿಯಿಂದ 21ನೇ ವಾರ್ಡ್ ಸದಸ್ಯ ಗಂಗಾಧರ ಸ್ವಾಮಿ ಹಿರೇಮಠ, ಉಪಾಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡ್ ಸದಸ್ಯೆ ರಾಜೇಶ್ವರಿ ಆಡೂರು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 5ನೇ ವಾರ್ಡ್ ಸದಸ್ಯ ನಾಗರಾಜ ಹಿರೇಮಠ, ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ 13ನೇ ವಾರ್ಡ್ ಸದಸ್ಯೆ ಜರೀನಾಬೇಗಂ ಕಾಯಿಗಡ್ಡಿ ನಾಮಪತ್ರ ಸಲ್ಲಿಸುವ ಮಾಹಿತಿ ಇದೆ.
ಪುರಸಭೆಯ 23 ಸದಸ್ಯ ಬಲದಲ್ಲಿ ಬಿಜೆಪಿ 8, ಕಾಂಗ್ರೆಸ್ ಬೆಂಬಲಿತ ಇಬ್ಬರು ಹಾಗೂ ಪಕ್ಷೇತರ ಇಬ್ಬರು, ಅವಿರೋಧ ಆಯ್ಕೆ ಒಬ್ಬರು ಸೇರಿದಂತೆ ಒಟ್ಟು 13 ಸದಸ್ಯ ಬಲದ ಬಿಜೆಪಿ ಸಮ್ಮಿಶ್ರ ಅಧಿಕಾರ ಗದ್ದುಗೆಗೇರುವುದು ನಿಚ್ಚಳವಾಗಿದೆ. 12 ಸದಸ್ಯ ಬಲದ ಕಾಂಗ್ರೆಸ್ ಸದಸ್ಯರಲ್ಲಿ ಇಬ್ಬರು ಸದಸ್ಯರು ಕೈಕೊಟ್ಟ ಪರಿಣಾಮ ಸದಸ್ಯ ಬಲ 10ಕ್ಕೆ ಕುಸಿದಿದೆ.