ಗಂಗಾವತಿ: ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ವಿಠಲಾಪುರ ಗ್ರಾಮದ ತೋಟದ ಮನೆಯೊಂದರಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರು, 17 ಐಷಾರಾಮಿ ಕಾರು ಹಾಗೂ 4.20 ಲಕ್ಷ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ.
ಗ್ರಾಮದ ತೋಟದ ಮನೆಯಲ್ಲಿ ಕಳೆದ ಹಲವು ತಿಂಗಳಿಂದ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎನ್ನಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಜೂಜುಕೋರರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.
ಈಗ ತೋಟದ ಮಾಲೀಕ ಸೇರಿದಂತೆ ಏಳು ಜನರನ್ನು ಬಂಧಿಸಿರುವ ಕನಕಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ್, ಗ್ರಾಮೀಣ ಸಿಪಿಐ ಸುರೇಶ ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.