ಗಂಗಾವತಿ (ಕೊಪ್ಪಳ): ಆರ್ಥಿಕವಾಗಿರುವ ಸ್ಥಿತಿವಂತರನ್ನು ಹನಿಟ್ರ್ಯಾಪ್ಗೆ ಕೆಡವಲು ಸಂಚು ರೂಪಿಸಿದ ಯುವಕರ ತಂಡವೊಂದು ಇದಕ್ಕಾಗಿ ಮಂಗಳಮುಖಿಯರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಮಂಗಳಮುಖಿಯರು ಒಪ್ಪದ ಹಿನ್ನೆಲೆ ಅವರ ಮೇಲೆ ಯುವಕರ ತಂಡ ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಯುವಕರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವವರನ್ನು ಗಾಂಧಿ ವೃತ್ತದ ನಿವಾಸಿಗಳಾದ ಅನುಶ್ರೀ, ರತ್ನಾ ಅಲಿಯಾಸ್ ರತಿ ಮತ್ತು ಸುಕನ್ಯಾ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಸ್ಪತ್ರೆ ವೈದ್ಯ ವಾದಿರಾಜ್, ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಗಂಭೀರ ಸ್ವರೂಪದ ಏಟುಗಳಾಗಿವೆ ಎಂದು ತಿಳಿಸಿದ್ದಾರೆ.
ಘಟನೆಯ ವಿವರ: ಇಲ್ಲಿನ ಅಮರ ಭಗತ್ ಸಿಂಗ್ ನಗರದ ಯುವಕನೊಬ್ಬನ ನೇತೃತ್ವದ ತಂಡವು ಶ್ರೀಮಂತ ವ್ಯಕ್ತಿಗಳನ್ನು ಹನಿಟ್ರ್ಯಾಪ್ಗೆ ಬೀಳಿಸಲು ತಂತ್ರ ರೂಪಿಸಿದೆ. ಈ ತಂತ್ರದ ಭಾಗವಾಗಿ ಮಂಗಳಮುಖಿಯರನ್ನು ಬಳಸಿಕೊಂಡು ಯೋಜನೆ ಕಾರ್ಯಗತ ಮಾಡುವುದು ಯುವಕರ ಉದ್ದೇಶ ಎಂದು ಮಂಗಳಮುಖಿಯರು ಆರೋಪಿಸಿದ್ದಾರೆ.
ಲೈಂಗಿಕ ಆಸಕ್ತಿ ತೋರುವ ಹಣಕಾಸು ಸ್ಥಿತಿವಂತರನ್ನು ನಾವೇ ನಿಮ್ಮ ಬಳಿಗೆ ಕಳಿಸುತ್ತೇವೆ. ಅವರನ್ನು ಲೈಂಗಿಕ ಆಸೆ ತೋರಿಸಿ ನಮ್ಮಲ್ಲಿಗೆ ಕರೆತರಬೇಕು. ಆಗ ನಾವು ಅವರಿಂದ ಹಣ ವಸೂಲಿ ಮಾಡುತ್ತೇವೆ. ಮರ್ಯಾದೆಗೆ ಅಂಜಿ ಅವರು ಹಣ ನೀಡುತ್ತಾರೆ ಎಂದು ಯುವಕರು, ಮಂಗಳಮುಖಿಯರಿಗೆ ತಿಳಿಸಿದ್ದರಂತೆ. ಇದಕ್ಕೆ ಒಪ್ಪದ ಮಂಗಳಮುಖಿಯರಿಗೆ ರಾತ್ರಿ ವಿದ್ಯಾನಗರದಿಂದ ಜುಲೈನಗರಕ್ಕೆ ಆಟೋದಲ್ಲಿ ಬರುವ ಸಂದರ್ಭದಲ್ಲಿ ರಾಣಾ ಪ್ರತಾಪ್ ಸಿಂಗ್ ವೃತ್ತದಲ್ಲಿ ಯುವಕರ ತಂಡ ಹಲ್ಲೆ ಮಾಡಿದೆ ಎಂದು ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಂಗಳಮುಖಿ ತಾರಾ, ''ಹನಿಟ್ರ್ಯಾಪ್ಗೆ ನೀವು ಸಹಕರಿಸಿದರೆ ನಿಮಗೆ ಇಲ್ಲಿ ಬದುಕಲು ಅವಕಾಶ ನೀಡುತ್ತೇವೆ. ಇಲ್ಲದಿದ್ದರೆ ನಿಮಗೆ ಇಲ್ಲಿರಲು ಬಿಡುವುದಿಲ್ಲ ಎಂದಿದ್ದಾರೆ. ಇದಕ್ಕೆ ಗಾಯಾಳು ಮಂಗಳಮುಖಿಯರು ನಿರಾಕರಿಸಿದ್ದಾರೆ. ಅಲ್ಲದೇ ನೀವು ಇಲ್ಲಿ ಇರಬೇಕೆಂದರೆ ನಿಮ್ಮ ದಿನ ನಿತ್ಯದ ಹಣದಲ್ಲಿ ಅರ್ಧಪಾಲು ನಮಗೂ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ'' ಎಂದು ಹೇಳಿದ್ದಾರೆ.
ಪೊಲೀಸರ ಮೇಲೆ ಹಲ್ಲೆ: ರಾತ್ರಿ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರ ಮೇಲೆ ಒಂದೇ ಬೈಕಿನಲ್ಲಿ ಬಂದ ಮೂವರು ಯುವಕರು ಮಾರಣಾಂತಿಕ ಹಲ್ಲೆ ಮಾಡಿ ಎಸ್ಕೇಪ್ ಆಗಿರುವ ಘಟನೆ ನಗರದ ಗಾಂಧಿ ವೃತ್ತದ ಡೈಲಿ ಮಾರ್ಕೆಟ್ ಬಳಿ ನಡೆದಿದೆ. ಘಟನೆಯಲ್ಲಿ ಶರಣಪ್ಪಗೌಡ ಮತ್ತು ಶಿವರಾಜ ಹರಿಜನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಹಿನ್ನೆಲೆ: ನಗರದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಸಮೀಪ ಗೇಮಿಂಗ್ ಸೆಂಟರ್ ಇದೆ. ರಾತ್ರಿ ಸಮಯ ಮೀರಿದ ಬಳಿಕವೂ ಸೆಂಟರ್ನಲ್ಲಿ ಯುವಕರು ಆಟವಾಡುತ್ತಿರುವುದನ್ನು ಗಸ್ತು ನಿಯೋಜಿತ ಪೊಲೀಸರು ಗಮನಿಸಿದ್ದಾರೆ. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸರು ಸೆಂಟರ್ ಮುಚ್ಚಿಸಿದ್ದಾರೆ.
ಇದಾದ ಬಳಿಕ ಅಲ್ಲಿಗೆ ಒಂದೇ ಬೈಕಿನಲ್ಲಿ ಮೂವರು ಯುವಕರು ಆಗಮಿಸಿದ್ದಾರೆ. ಅನುಮಾನಗೊಂಡ ಪೊಲೀಸರು ಮಾದಕ ಪದಾರ್ಥ ಸೇವನೆ ಮಾಡಿರುವ ಶಂಕೆಯ ಮೇಲೆ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಯುವಕರು ತಮ್ಮ ಬಳಿ ಇದ್ದ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಮೇಲೆ ಹಲ್ಲೆ, ದೂರು ದಾಖಲು