ಗಂಗಾವತಿ: ಮೌಲ್ವಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ಇಲ್ಲಿನ ಕಿಲ್ಲಾ ಏರಿಯಾದಲ್ಲಿ ಬೆಳ್ಳಂ ಬೆಳಗ್ಗೆ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ, ಕಂದಾಯ ಹಾಗೂ ನಗರಸಭೆ ಅಧಿಕಾರಿಗಳು ವ್ಯಕ್ತಿಯನ್ನು ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಕಿಲ್ಲಾ ಏರಿಯಾದ ವಕೀಲ್ ಗೇಟ್ ಸಮೀಪ ಇರುವ ಮನೆಯೊಂದರಲ್ಲಿ ಈತ ಬಾಡಿಗೆ ಇದ್ದ. ಒಬ್ಬನೇ ವಾಸಿಸುತ್ತಿದ್ದು, ಮೂಲತಃ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದೋನಿ ಪಟ್ಟಣದ ವ್ಯಕ್ತಿಯಾಗಿದ್ದು, ಕಳೆದ ಹಲವು ವರ್ಷದಿಂದ ಗಂಗಾವತಿಯಲ್ಲಿ ನೆಲೆಸಿದ್ದರು. ಇನ್ನು ಇವರು ನಮಾಜ್ ಮಾಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.
ಕೇವಲ ಎರಡು ದಿನಗಳ ಹಿಂದಷ್ಟೆ ಆದೋನಿ ಪಟ್ಟಣದಿಂದ ಬಂದಿದ್ದು, ಟ್ರಾವೆಲ್ ಹಿಸ್ಟರಿ ಹಿನ್ನೆಲೆ ವ್ಯಕ್ತಿಗೆ ಗಂಟಲು ದ್ರವ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ. ಇದೀಗ ಅಧಿಕಾರಿಗಳು ಏರಿಯಾವನ್ನು ಸೀಲ್ಡೌನ್ ಮಾಡಲು ತಯಾರಿ ಮಾಡುತ್ತಿದ್ದಾರೆ.