ಗಂಗಾವತಿ : ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ಪ್ರಮಾಣದ ನೀರು ಹರಿಸಿದ್ದರಿಂದ ತಾಲೂಕಿನ ಆನೆಗೊಂದಿ ಸಮೀಪದ ಇರುವ ಮಾಧ್ವಮತ ಅನುಯಾಯಿಗಳ ಪ್ರಮುಖ ಧಾರ್ಮಿಕ ಕೇಂದ್ರ ನವವೃಂದಾವನ ಗಡ್ಡೆಯ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಜು.14ರಿಂದ 21ರವರೆಗೆ ಉತ್ತರಾದಿ ಮಠ ಮತ್ತು ರಾಯರ ಮಠದ ಅನುಯಾಯಿಗಳು ನವ ವೃಂದಾವನದಲ್ಲಿ ರಘುವರ್ಯ ಮತ್ತು ಜಯತೀರ್ಥರ ಆರಾಧನೆ, ಮಹಿಮೋತ್ಸವ ಹಮ್ಮಿಕೊಳ್ಳಲು ಯೋಜನೆ ರೂಪಿಸಿದ್ದರು.
ಆದರೆ, ಈ ಧಾರ್ಮಿಕ ಆಚರಣೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆ ಈ ಬಗ್ಗೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಕೇವಲ ಒಂದೊಂದು ಮಠದಿಂದ ಒಬ್ಬೊಬ್ಬ ಅರ್ಚಕರು ಮಾತ್ರ ವೃಂದಾವನದ ಗಡ್ಡೆಗೆ ತೆರಳಿ ಪೂಜೆ ಮತ್ತು ಧಾರ್ಮಿಕ ಕಾರ್ಯ ಕೈಗೊಳ್ಳಲು ಅವಕಾಶ ನೀಡಿತ್ತು. ಆದರೆ ಇದೀಗ ನದಿಯಲ್ಲಿ ಉಂಟಾಗಿರುವ ಪ್ರವಾಹದ ಸ್ಥಿತಿಯಿಂದಾಗಿ ಈಗ ಅದೂ ಸ್ಥಗಿತವಾಗಿದೆ.
ಆನೆಗೊಂದಿಯ ರಾಯರ ಮಠದಿಂದ ಆಗಮಿಸುವ ಅರ್ಚಕರು ನಿತ್ಯ ನಾಡದೋಣಿಯ ಮೂಲಕ ನದಿಯನ್ನು ದಾಟಿ ವೃಂದಾವನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಅದೇ ದೋಣಿಯ ಮೂಲಕ ವಾಪಾಸ್ ಆಗುತ್ತಿದ್ದರು. ಆದರೆ, ಈಗ ಪ್ರವಾಹದಿಂದಾಗಿ ವೃಂದಾವನ ಜಲಾವೃತಗೊಂಡು ಸಂಪರ್ಕ ಕಳೆದುಕೊಂಡಿದೆ.
ಓದಿ : ಸಿದ್ದರಾಮಯ್ಯ ಅಮೃತ ಮಹೋತ್ಸವದ ಪೂರ್ವ ಸಿದ್ಧತಾ ಸಭೆ - ಡಿಕೆಶಿ ಗೈರು!