ಗಂಗಾವತಿ(ಕೊಪ್ಪಳ): ಕನಕಗಿರಿ ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಿಕೇರಿ ಗ್ರಾಮದಲ್ಲಿ ನೆಲದಲ್ಲಿ ಹುದುಗಿ ಹೋಗಿರುವ ಪುರಾತನ ಕಾಲದ ಸ್ಮಾರಕವೊಂದು ಪತ್ತೆಯಾಗಿದೆ. ಸ್ಥಳಕ್ಕೆ ಪುರಾತತ್ವ ಹಾಗೂ ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐತಿಹಾಸಿಕ ಕನಕಗಿರಿಯಿಂದ ಕೇವಲ ಮೂರ್ನಾಲ್ಕು ಕಿ.ಮೀ ದೂರದಲ್ಲಿರುವ ಕಲಿಕೇರಿ ಗ್ರಾಮದಲ್ಲಿ ಪತ್ತೆಯಾಗಿರುವ ಸ್ಮಾರಕ ಸಂಪೂರ್ಣ ನೆಲದಲ್ಲಿ ಹುದುಗಿ ಹೋಗಿದೆ. ಮೇಲೆ ಅಲ್ಲಲ್ಲಿ ಮಂಟಪದ ಕುರುಹುಗಳು ಮಾತ್ರ ಕಾಣುತ್ತಿವೆ. 'ನಮ್ಮ ತಾತ, ಅಪ್ಪನ ಕಾಲದಿಂದ ಅಂದರೆ ಕಳೆದ ಆರೆಂಟು ದಶಕದಿಂದ ಗ್ರಾಮದಲ್ಲಿ ಈ ಸ್ಮಾರಕ ಇದೇ ರೀತಿಯಲ್ಲಿದೆ. ಅದು ಯಾವಾಗ ಮುಚ್ಚಿ ಹೋಗಿದೆ ಎಂಬುವುದು ನಮಗೆ ಗೊತ್ತಿಲ್ಲ. ಅದನ್ನು ಯಾರೂ ಮುಚ್ಚಿಲ್ಲ' ಎಂದು ಗ್ರಾಮದ ಕರಿಯಪ್ಪ ಎಂಬುವವರು ತಿಳಿಸಿದ್ದಾರೆ.
"ಇದನ್ನು ಎದುರು ಮಂಟಪ ಬಸವಣ್ಣ ದೇವರ ಗುಡಿ ಎಂದು ನಮ್ಮ ಹಿರಿಯರು ಹೇಳುತ್ತಿದ್ದದ್ದು ನೆನಪಿದೆ. ಕನಕಗಿರಿಯ ಕನಕಾಚಲ ದೇವಸ್ಥಾನಕ್ಕೆ ಪೂರ್ವಾಭಿಮುಖವಾಗಿ ಈ ದೇಗುಲ ಇತ್ತು. ಇದರ ಮಹತ್ವ ಸೇರಿದಂತೆ ಯಾವುದೇ ಮಾಹಿತಿ ಇಲ್ಲ" ಎನ್ನುತ್ತಾರೆ ಸ್ಥಳೀಯರು. "ಸುಮಾರು ಏಳು ನೂರು ವರ್ಷಗಳ ಹಿಂದೆ ಈ ಸ್ಮಾರಕ ನಿರ್ಮಾಣವಾಗಿರುವ ಸಾಧ್ಯತೆ ಇದೆ. ವಿಜಯನಗರದ ಅರಸರ ಕಾಲದಲ್ಲಿ ಕನಕಗಿರಿಯ ಪಾಳೇಗಾರರು ಸಾಮಂತರಾಗಿದ್ದರು. ಇದೇ ಕಾಲಘಟ್ಟದಲ್ಲಿ ನಿರ್ಮಾಣವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೊಪ್ಪಳ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ ಇತ್ತೀಚೆಗೆ ಅನ್ಯ ಉದ್ದೇಶಕ್ಕೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಸ್ಮಾರಕ ನೆಲದಲ್ಲಿ ಹುದುಗಿ ಹೋಗಿರುವುದನ್ನು ಗಮನಿಸಿದ್ದರು, ಕೂಡಲೇ ರಾಜ್ಯ ಪುರಾತತ್ವ ಮತ್ತು ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಇದನ್ನು ಉತ್ಖನನ ಮಾಡಿ ಹೊರಕ್ಕೆ ತೆಗೆದು ಸಂರಕ್ಷಣೆ ಮಾಡುವಂತೆ ಕೋರಿದ್ದರು. ಈ ಹಿನ್ನೆಲೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಇಲಾಖೆಯ ಪ್ರಹ್ಲಾದ್, ಮಂಜುನಾಥ ನಾಯಕ, ಕುಬೇರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು, ಪಿಡಿಒ ಶಂಶೀರ್ ಅಲಿ, ಸೈಯದ್ ತನ್ವಿರ್, ಕೆ. ಶಿವಕುಮಾರ ಇದ್ದರು.
ಕಾಲಗರ್ಭ ಸೇರುತ್ತಿವೆ ಪುರಾತನ ಸ್ಮಾರಕಗಳು: ಐತಿಹಾಸಿಕ ಹಿನ್ನೆಲೆಯುಳ್ಳ ಕನಕಗಿರಿ ಪಟ್ಟಣ ಧಾರ್ಮಿಕವಾಗಿ ಮಾತ್ರವಲ್ಲದೇ ಪುರಾತನ ಸ್ಮಾರಕಗಳಿಂದ ಸಾಂಸ್ಕೃತಿಕವಾಗಿ ತನ್ನದೇ ಆದ ವೈಶಿಷ್ಟತೆ ಹೊಂದಿವೆ. ಪುರಾತತ್ವ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿರ್ಲಕ್ಷ್ಯದಿಂದ ಪುರಾತನ ಸ್ಮಾರಕಗಳು, ದೇವಾಲಯಗಳು ಕ್ರಮೇಣ ಕಾಲಗರ್ಭಕ್ಕೆ ಸೇರುತ್ತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಅತೀವ ಬೇಸರ ಮೂಡಿಸಿದೆ. ಹಾಲಿ ಸಚಿವ ಶಿವರಾಜ ತಂಗಡಗಿ ಮೂರು ಬಾರಿ ಸಚಿವರಾಗಿ, ಬಸವರಾಜ ದಢೇಸುಗೂರು ಶಾಸಕರಾಗಿ ಇದೇ ಕ್ಷೇತ್ರದಿಂದ ಆಯ್ಕೆಯಾದರೂ ಈ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಯಾವುದೇ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಕನಕಗಿರಿಯ ಹಿನ್ನೆಲೆ: ಕ್ರಿ.ಶ. 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಮಾಂಡಲೀಕ ದೊರೆಗಳಿಂದ ಆಳಲ್ಪಡುತ್ತಿದ್ದ ಸುವರ್ಣಗಿರಿ (ಈಗಿನ ಕನಕಗಿರಿ) ವೈಭವದಿಂದ ಕೂಡಿದ್ದ ಸಮೃದ್ದ ನಾಡು. ಇಲ್ಲಿಯ ಅರಸರು ವಾಸ್ತುಶಿಲ್ಪ ಕಲೆಗೆ ವಿಶೇಷ ಒತ್ತು ನೀಡುತ್ತಿದ್ದರು. ನೂರಾರು ಮಠ, ಮಂದಿರ, ಸ್ಮಾರಕಗಳನ್ನು ಕಟ್ಟಿಸಿರುವುದು ಇದಕ್ಕೆ ನಿದರ್ಶನ. ಲೋಕನಾಥನಾದ ಮಹಾವಿಷ್ಣು ಕನಕಾಚಲ ಲಕ್ಷ್ಮೀನರಸಿಂಹ ನಾಮಾಂಕಿತನಾಗಿ ಸಾಲಿಗ್ರಾಮ ಶಿಲಾರೂಪದಲ್ಲಿ ನೆಲೆಸಿರುವುದು ಈ ಕ್ಷೇತ್ರದ ವಿಶೇಷತೆ. ಕನಕಗಿರಿ ಎಂದ ಕೂಡಲೇ ಜನಪದರ ಬಾಯಲ್ಲಿ ನೆನಪಾಗೋದು, ''ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪೆ ನೋಡಬೇಕು'' ಎಂಬ ಮಾತು. ಈ ನಾಣ್ಣುಡಿ ಅಜರಾಮರ.
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನೂರಾರು ಐತಿಹಾಸಿಕ ಸ್ಮಾರಕಗಳು ನಿರ್ವಹಣೆಯ ಕೊರತೆಯಿಂದ ಸೊರಗಿ ಹೋಗುತ್ತಿವೆ. ಈ ಸ್ಮಾರಕಗಳು ಕಾಲಗರ್ಭ ಸೇರುತ್ತಿರುವುದು ಪ್ರಜ್ಞಾವಂತ ನಾಗರಿಕರ ಕಳವಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕಾಲಗರ್ಭ ಸೇರುತ್ತಿವೆ ಪುರಾತನ ಸ್ಮಾರಕಗಳು: ಕನಕಗಿರಿ ಪುಷ್ಕರಣಿಯ ಕಥೆಯಲ್ಲ, ಇದು ವ್ಯಥೆ