ಗಂಗಾವತಿ: ಕಂಪ್ಲಿ ಕೋಟೆಯಲ್ಲಿ ಪತ್ತೆಯಾಗಿರುವ ಪುರಾತನ ಕಾಲದ ಮದ್ದು-ಗುಂಡುಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಅವು ಶಿವಾಜಿ ತಂದೆಯಾಗಿದ್ದ ಬಿಜಾಪುರದ ಆದಿಲ್ ಶಾಹಿ ಸಾಮ್ರಾಜ್ಯದ ದಂಡನಾಯಕ ಶಹಜಿ ಕಾಲದ್ದು ಎಂದು ಇತಿಹಾಸ ಸಂಶೋಧಕ, ಪ್ರಾಧ್ಯಾಪಕ ಗಂಗಾವತಿಯ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಬಳಿಕ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದರು. 17ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ ಬಿಜಾಪುರದ ಆದಿಲ್ ಶಾಹಿಗಳು ಕಂಪ್ಲಿಯ ಕೋಟೆಯನ್ನು ವಶಕ್ಕೆ ಪಡೆಯುತ್ತಾರೆ. ಆಗ ಆದಿಲ್ ಶಾಹಿಗಳ ಸೈನ್ಯದ ದಂಡನಾಯಕನಾಗಿದ್ದ, ಶಿವಾಜಿ ತಂದೆ ಶಹಜಿ ಬಿಜಾಪುರದ ಅರಸರಿಂದ ಜಹಾಗೀರ್ ಆಗಿ ಕಂಪ್ಲಿಯ ಕೋಟೆಯನ್ನು ಪಡೆದುಕೊಳ್ಳುತ್ತಾನೆ.
ಬಳಿಕ ಕೋಟೆಯ ಸಮೀಪ ಶಹಜಿ ಕೆಲಕಾಲ ಮನೆ ಮಾಡಿಕೊಂಡು ವಾಸ ಮಾಡುತ್ತಾನೆ. ಆ ಸಮಯದಲ್ಲಿ ಈ ಮದ್ದುಗುಂಡುಗಳನ್ನು ಸಂಗ್ರಹಿಸಿಟ್ಟಿರಬಹುದು. ಏಕೆಂದರೆ ಮದ್ದು-ಗುಂಡು, ಫಿರಂಗಿಗಳನ್ನು ಹೆಚ್ಚಾಗಿ ಬಳಸಿದ್ದು ಬಿಜಾಪುರದ ಆದಿಲ್ ಶಾಹಿಗಳು. ಪ್ರಾಯಶಃ ಆ ಸಂದರ್ಭದಲ್ಲಿ ರಕ್ಷಣಾ ಉದ್ದೇಶದ ಭಾಗವಾಗಿ ಇಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಿಟ್ಟಿರಬಹುದು ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ ಎಂದರು.
ವಿಜಯನಗರದ ಅರಸರ ಕಾಲದಲ್ಲಿ ಕೋಟೆ ಕಟ್ಟಿರಬಹುದು. ಆದರೆ ಮದ್ದು-ಗುಂಡುಗಳನ್ನು ಇಟ್ಟುಕೊಂಡು ಯುದ್ಧ ಮಾಡಿರುವ ಸಾಧ್ಯತೆ ಕಡಿಮೆ. ಹೀಗಾಗಿ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ಮಾಡಿದರೆ ಮಾತ್ರ ಇನ್ನಷ್ಟು ಮಾಹಿತಿ ಗೊತ್ತಾಗಲಿದೆ ಎಂದು ಡಾ. ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಕದಂಬ ರಾಜವಂಶಸ್ಥ ರವಿವರ್ಮ ಕಾಲದ ಕಲ್ಲಿನ ಶಾಸನ ಪತ್ತೆ