ಕೊಪ್ಪಳ: ರಂಗಭೂಮಿ ಕಲೆಯ ಸೆಳೆತವೇ ಅಂತಹದ್ದು. ಎಂತಹ ಸಂದಿಗ್ಧ ಪರಿಸ್ಥಿತಿ ಬಂದರೂ ಸಹ ಕಲಾ ಪ್ರದರ್ಶನ ಮಾತ್ರ ನಿಲ್ಲಿಸುವುದಿಲ್ಲ. ಇಂತಹ ಗಂಡುಕಲೆಯನ್ನು, ಕಲಾವಿದರನ್ನು ಪ್ರೇಕ್ಷಕರೂ ಪ್ರೋತ್ಸಾಹಿಸುತ್ತಾರೆ. ಅದರಲ್ಲೂ ಕೊರೊನಾ ಸಂಕಷ್ಟದಿಂದ ನಲುಗಿದ್ದ ವೃತ್ತಿ ರಂಗಭೂಮಿ ಕಲಾವಿದರನ್ನು ಪ್ರೇಕ್ಷಕರು ಈಗ ಕೈಹಿಡಿಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಈಗಿರುವ ಮೂರು ಕಂಪನಿಗಳ ನಾಟಕಗಳಿಗೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ.
ಹೌದು...., ಕೊರೊನಾ ಸೋಂಕಿನ ಭೀತಿಯಿಂದಾದ ಲಾಕ್ಡೌನ್ ಎಫೆಕ್ಟ್ ಎಲ್ಲಾ ಕ್ಷೇತ್ರಗಳ ಮೇಲೂ ಆಗಿದೆ. ಅನ್ಲಾಕ್ ಬಳಿಕ ಬದುಕು ಒಂದಿಷ್ಟು ಹಳಿಗೆ ಬರುವತ್ತ ಸಾಗುತ್ತಿದೆ. ಒಂದೊಂದಾಗಿ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, ಸಿನಿಮಾ ಹಾಗೂ ರಂಗಭೂಮಿ ಚಟುವಟಿಕೆಗಳು ಸಹ ಆರಂಭಗೊಂಡಿವೆ. ಆದರೆ ಜಿಲ್ಲೆಯಲ್ಲಿ ಸಿನಿಮಾ ಥಿಯೇಟರ್ಗಳಿಗೆ ಜನ ಬರಲು ಹಿಂದೇಟು ಹಾಕುತ್ತಿರುವಾಗ ರಂಗಭೂಮಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
ಕೊರೊನಾ ಭೀತಿಯಿಂದ ಸ್ಥಗಿತಗೊಳಿಸಿದ್ದ ವೃತ್ತಿ ರಂಗಭೂಮಿ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, ವೃತ್ತಿ ರಂಗಭೂಮಿ ಕಲೆಯನ್ನೇ ನಂಬಿಕೊಂಡಿದ್ದ ಸಾವಿರಾರು ಕಲಾವಿದರು, ನಾಟಕ ಕಂಪನಿಗಳು ತುಸು ನಿಟ್ಟುಸಿರು ಬಿಟ್ಟಿವೆ. ಅನ್ಲಾಕ್ ಬಳಿಕ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಮೂರು ನಾಟಕ ಕಂಪನಿಗಳು ಕ್ಯಾಂಪ್ ಹಾಕಿದ್ದು, ಜಿಲ್ಲೆಯ ಜನರು ಕಲಾವಿದರನ್ನು ಕೈಹಿಡಿದು ಪ್ರೋತ್ಸಾಹಿಸುತ್ತಿದ್ದಾರೆ.
ಕೊಪ್ಪಳ ನಗರದಲ್ಲಿ ಶ್ರೀ ಘನಮಠೇಶ್ವರ ನಾಟ್ಯ ಸಂಘ ಕುಂಟೋಜಿ ಕಂಪನಿ, ಯಲಬುರ್ಗಾ ಪಟ್ಟಣದಲ್ಲಿ ಶ್ರೀ ಗುರು ತೋಂಟದಾರ್ಯ ನಾಟ್ಯ ಸಂಘ ಮಂಡಲಗಿರಿ ಕಂಪನಿ ಹಾಗೂ ಕುಕನೂರು ಪಟ್ಟಣದಲ್ಲಿ ಶ್ರೀ ಕುಮಾರೇಶ್ವರ ನಾಟ್ಯ ಸಂಘ ಮಂಡಲಗಿರಿ ಕಂಪನಿ ಕ್ಯಾಂಪ್ ಹಾಕಿವೆ. ಯಲಬುರ್ಗಾದಲ್ಲಿ "ಅತ್ತೆ ಸಿಂಗಾರಿ ಸೊಸೆ ಬಂಗಾರಿ", ಕುಕನೂರಿನಲ್ಲಿ "ಗಂಗೆ ಹೋದಳು, ಗೌರಿ ಬಂದಳು" ಹಾಗೂ ಕೊಪ್ಪಳ ನಗರದಲ್ಲಿನ ಶ್ರೀ ಘನಮಠೇಶ್ವರ ನಾಟ್ಯ ಸಂಘ ಕುಂಟೋಜಿ ಕಂಪನಿಯವರಿಂದ "ಹೌದ್ದೋ ಹುಲಿಯಾ" ನಾಟಕಗಳ ಪ್ರದರ್ಶನ ನಡೆಯುತ್ತಿವೆ. ಈ ಮೂರು ನಾಟಕಗಳಿಗೆ ಜನರು ಫಿದಾ ಆಗಿದ್ದಾರೆ.
ಸಿನಿಮಾಗಿಂತ ನಾಟಕಗಳಿಗೆ ಜನರು ಹೆಚ್ಚು ಒಲವು ತೋರಿಸುತ್ತಿದ್ದು, ಹೌಸ್ಫುಲ್ ಆಗಿ ಪ್ರದರ್ಶನ ಕಾಣುತ್ತಿವೆ. ಕೊರೊನಾದಿಂದಾದ ಸಂಕಷ್ಟಕ್ಕೆ ನಾಟಕ ಕಂಪನಿಗಳಿಗೆ ಹಾಗೂ ವೃತ್ತಿ ರಂಗಭೂಮಿ ಕಲಾವಿದರಿಗೆ ಪ್ರೇಕ್ಷಕರಿಂದ ಸಿಗುತ್ತಿರುವ ಅಭೂತಪೂರ್ವ ಪ್ರೋತ್ಸಾಹ ಮತ್ತಷ್ಟು ಹುಮ್ಮಸ್ಸು ನೀಡಿದೆ.