ಕುಷ್ಟಗಿ (ಕೊಪ್ಪಳ): ಮೊಬೈಲ್ ಫೋನ್ ಕರೆ ಸ್ವೀಕರಿಸದ ಕಾರಣಕ್ಕೆ ಜೆಸ್ಕಾಂ ಸೆಕ್ಷನ್ ಆಫೀಸರ್ ಮೇಲೆ ಗುತ್ತಿಗೆದಾರನೋರ್ವ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮಂಜುನಾಥ ಉಪ್ಪಾರ ಹಲ್ಲೆಗೆ ಒಳಗಾಗಿರುವುದಾಗಿ ಆರೋಪಿಸಿರುವ ಜೆಸ್ಕಾಂ ಸೆಕ್ಷನ್ ಆಫೀಸರ್. ಈತ ಬುಧವಾರ ರಾತ್ರಿ ಎಪಿಎಂಸಿ ಗೇಟ್ ಎದುರಿನ ಫ್ಲೈಓವರ್ ಕೆಳಗೆ ಬರುತ್ತಿದ್ದರು. ಈ ವೇಳೆ ಜೆಸ್ಕಾಂ ಗುತ್ತಿಗೆದಾರ ಯಮನೂರಪ್ಪ ಕಟ್ಟಿಮನಿ ಹಾಗೂ ರಮೇಶ ಇಂಡಿ ಇಬ್ಬರು ಕುಡಿದ ಅಮಲಿನಲ್ಲಿ ಏನೂ ಕೇಳದೇ ಅವಾಚ್ಯವಾಗಿ ನಿಂದಿಸಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ಜೆಸ್ಕಾಂ ಸಿಬ್ಬಂದಿ ಜೆಇ ಮಂಜುನಾಥ ಉಪ್ಪಾರ ಅವರ ಬೆಂಬಲಕ್ಕೆ ನಿಂತಿದ್ದು ಕುಷ್ಟಗಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಜೆಇ ಮಂಜುನಾಥ ಪ್ರತಿಕ್ರಿಯಿಸಿ, ದೋಟಿಹಾಳ 33 ಕೆವಿ ಸೆಕ್ಷನ್ ಆಫೀಸರ್ ಕೆಲಸ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ಕುಷ್ಟಗಿ ಜವಾಬ್ದಾರಿ ವಹಿಸಲಾಗಿದೆ. ಕೆಲಸದ ಒತ್ತಡದಲ್ಲಿ ಗುತ್ತಿಗೆದಾರ ಯಮನೂರಪ್ಪ ಕಟ್ಟಿಮನಿ ಫೋನ್ ಕರೆ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಅವರು ಹೆಚ್ಚುವರಿ ಕೆಲಸದಲ್ಲಿ ಇದ್ದುದರಿಂದ ವಿಳಂಬವಾಗಿದೆ. ಅದನ್ನೇ ಕಾರಣವಾಗಿಟ್ಟುಕೊಂಡು ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.