ಕೊಪ್ಪಳ: ಸ್ವ-ಇಚ್ಛೆಯಿಂದ ಶಾಲೆ, ಬಸ್ ನಿಲ್ದಾಣ ಹಾಗೂ ಸ್ಮಶಾನಗಳನ್ನು ತನ್ನದೇ ಆದ ತಂಡ ಕಟ್ಟಿಕೊಂಡು ಸ್ವಚ್ಛ ಮಾಡುವ ಸಮಾಜ ಸೇವಕಿ ಅಕ್ಕ ಅನು ನಿನ್ನೆ (ಮಂಗಳವಾರ) ಟ್ರ್ಯಾಕ್ಟರ್ನಲ್ಲಿ ಸ್ಮಶಾನದಲ್ಲಿನ ಕಸವನ್ನು ತೆಗೆದುಕೊಂಡು ಕೊಪ್ಪಳ ನಗರಸಭೆಗೆ ಬಂದ ಘಟನೆ ನಡೆಯಿತು.
ಯಾರು ಈ ಅಕ್ಕ ಅನು?: ರಾಯಚೂರು ಜಿಲ್ಲೆಯ ಸಿಂಧನೂರು ಮೂಲದ ಅಕ್ಕ ಅನು ಎಂಬ ಯುವತಿ ರಾಜ್ಯದ ವಿವಿಧೆಡೆ ಸಂಚರಿಸಿ ಸರ್ಕಾರಿ ಶಾಲೆಗಳನ್ನು ಸ್ವಚ್ಛ ಹಾಗೂ ಸುಂದರಗೊಳಿಸುತ್ತಾರೆ. ಇದರ ಜತೆಗೆ ನಗರಗಳಲ್ಲಿ ರಸ್ತೆ, ಬಸ್ ನಿಲ್ದಾಣ ಹಾಗೂ ಸ್ಮಶಾನಗಳನ್ನು ಸಹ ಸ್ವಚ್ಛ ಮಾಡುತ್ತಿದ್ದಾರೆ.
ಕೊಪ್ಪಳ ನಗರದಲ್ಲಿ ಒಂದು ತಿಂಗಳಿನಿಂದ ಇದ್ದು ಭಾಗ್ಯನಗರ ಸರ್ಕಾರಿ ಶಾಲೆ ಸ್ವಚ್ಛಗೊಳಿಸಿದ್ದಾರೆ. ಈಗ ಕೊಪ್ಪಳದ ಗವಿಮಠದ ಹಿಂದೆ ಇರುವ ಸ್ಮಶಾನವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಸ್ಮಶಾನದಲ್ಲಿನ ಕಸ, ಮುಳ್ಳು ಕಂಟಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಸ್ಥಳೀಯ ಯುವಕರು ಸಾಥ್ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಸ್ಮಶಾನ ಸ್ವಚ್ಛ ಮಾಡುತ್ತಿದ್ದು, ನಗರಸಭೆ ಸ್ವಚ್ಛತೆಗೆ ಬೇಕಾಗುವ ಪರಿಕರಗಳನ್ನು ನೀಡಬೇಕು. ಆದರೆ ಕಾಟಾಚಾರಕ್ಕೆ ಒಂದೆರೆಡು ಪರಿಕರಗಳನ್ನು ಕೊಟ್ಟಿದ್ದರು. ಆಗ ತಾವೇ ಸ್ವಂತ ಖರ್ಚಿನಲ್ಲಿ ಪರಿಕರಗಳನ್ನು ಖರೀದಿಸಿ ಸ್ವಚ್ಛ ಮಾಡುತ್ತಿದ್ದಾರೆ.
ಈ ಮಧ್ಯೆ ಇಲ್ಲಿರುವ ಕಸವನ್ನು ಸಾಗಿಸಲು ಕನಿಷ್ಠ ವಾಹನವನ್ನಾದರೂ ನೀಡಿ ಎಂದು ಮನವಿ ಮಾಡಿಕೊಂಡರೂ ನಗರಸಭೆ ಸಹಕಾರ ನೀಡಲಿಲ್ಲ. ಇದರಿಂದ ಬೇಸರಗೊಂಡ ಅಕ್ಕ ಅನು ಹಾಗೂ ಅವರ ತಂಡ ಟ್ರ್ಯಾಕ್ಟರ್ನಲ್ಲಿ ಕಸವನ್ನು ತುಂಬಿಕೊಂಡು ಬಂದು ನಗರಸಭೆ ಎದುರು ಪ್ರತಿಭಟನೆ ನಡೆಸಿದರು. ಇಲ್ಲಿರುವ ಕಸವನ್ನು ನಗರಸಭೆಗೆ ನೀಡುತ್ತೇವೆ. ನೀವು ಏನಾದರೂ ಮಾಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ ತಕ್ಷಣ ಒಂದು ವಾಹನ ಹಾಗೂ ಅಗತ್ಯ ಪರಿಕರ ನೀಡುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ದೇಶದಲ್ಲಿ ಚಿಲ್ಲರೆ ಹಣದುಬ್ಬರ 17 ತಿಂಗಳಲ್ಲೇ ಹೆಚ್ಚು! ನಗರಕ್ಕಿಂತ ಗ್ರಾಮೀಣ ಬದುಕೇ ತುಟ್ಟಿ