ಕೊಪ್ಪಳ: ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಉಪಚುನಾವಣೆಯೊಳಗೆ ಸಂಪುಟಕ್ಕೆ ತಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮುತ್ತಣ್ಣ ಬೆನ್ನೂರು ಆಗ್ರಹಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್ನಲ್ಲಿ ಮಾತನಾಡಿದ ಅವರು, ವರದಿ ಜಾರಿಯಲ್ಲಿ ಈವರೆಗಿನ ಸರ್ಕಾರಗಳು ಮೀನಮೇಷ ಎಣಿಸಿವೆ. ಮಾದಿಗ ಮತ್ತು ಛಲವಾದಿ ಸಂಬಂಧಿತ ಜಾತಿಗಳು ಒಂದಾಗಿ ಈಗಾಗಲೇ ಸರ್ಕಾರವನ್ನು ಆಗ್ರಹಿಸಿವೆ. ಸಿದ್ದರಾಮಯ್ಯ ಅವರ ಸರ್ಕಾರ ಸದಾಶಿವ ಆಯೋಗದ ವರದಿ ಜಾರಿ ಮಾಡದೆ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.
2019 ರಲ್ಲಿ ನಮ್ಮ ಸಮುದಾಯ ಬಿಜೆಪಿಯನ್ನು ಬೆಂಬಲಿಸಿದೆ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಅವರ ಮೇಲೆ ನಮಗೆ ಭರವಸೆ ಇದೆ ಎಂದಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿಗಾಗಿ ಹೋರಾಡುತ್ತಿರುವ ಮಾದಿಗರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.