ಗಂಗಾವತಿ: ಪಹಣಿಯ ತಿದ್ದುಪಡಿ ಮಾಡಲು ಕಂದಾಯ ನಿರೀಕ್ಷಕ ವಿಜಯಕುಮಾರ ರೈತನಿಗೆ ಲಂಚದ ಬೇಡಿಕೆ ಇಟ್ಟಿದ್ದು ಲಂಚ ಪಡೆಯುವ ವೇಳೆ ರೆಡ್ಹ್ಯಾಂಡ್ ಆಗಿ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.
ನಗರದ ಮಿನಿ ವಿಧಾನಸೌಧಲ್ಲಿ ರೈತ ಎಂ ಕೆ ಖಾನ್ ಎಂಬಾತನ ಪಹಣಿಯ 9ನೇ ಕಲಂನಲ್ಲಿ ತಿದ್ದುಪಡಿ ಮಾಡಲು ಕಂದಾಯ ನಿರೀಕ್ಷಕ ವಿಜಯಕುಮಾರ 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಲೋಕಾಯುಕ್ತ ಅಧಿಕಾರಿಗಳು, ವಿಜಯಕುಮಾರನನ್ನ ರೈತನಿಂದ ಲಂಚ ಪಡೆಯುವ ವೇಳೆ ಬಂಧಿಸಿದ್ದಾರೆ.
ಬಸವಪಟ್ಟಣ ಗ್ರಾಮದ ಸರ್ವೇ ನಂಬರ್ 76/6ರಲ್ಲಿರುವ ರೈತನ ಪಹಣಿಯ 9ನೇ ಕಲಂನಲ್ಲಿ ಮೋಹಿನ್ ಪಾಷಾ ತಂದೆ ಮೈನುದ್ದೀನ್ ಪಾಷಾ ಎಂದು ಇರಬೇಕಿತ್ತು. ಆದರೆ, ಮೋಹನ್ ಪಾಷಾ ತಂದೆ ಮೋಹನದ್ದೀನ್ ಎಂದಾಗಿದೆ. ಕಾನೂನು ಬದ್ಧವಾಗಿ ಬದಲಿಸಿಕೊಡುವಂತೆ ರೈತ ಕೇಳಿದಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚದ ಮುಂಗಡ ಆರು ಸಾವಿರ ರೂ. ಕೊಡುವಾಗ ಬಲೆಬೀಸಿದ ಲೋಕಾಯುಕ್ತರು ಹಣದ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಪ್ರಭಾರಿ ಡಿವೈಎಸ್ಪಿ ಚಂದ್ರಕಾಂತ್ ಪೂಜಾರಿ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿದ್ದರು.