ಕೊಪ್ಪಳ: ಕೊರೊನಾ ಸೋಂಕು ಎರಡನೇ ಅಲೆಯು ಜಿಲ್ಲೆಯಲ್ಲಿಯೂ ವ್ಯಾಪಕವಾಗಿ ಹರಡಿದೆ. ಕೊರೊನಾ ಸೋಂಕು ಹಲವು ಗರ್ಭಿಣಿಯರಿಗೂ ತಗುಲಿ ಸೋಂಕಿತರಾಗುತ್ತಿದ್ದಾರೆ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸೋಂಕು ತಗುಲಿದ ಗರ್ಭಿಣಿಯರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗುತ್ತಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋದರಿಂದ ಜನರು ಸಹಜವಾಗಿ ಭಯದಲ್ಲಿರುವಂತಾಗಿದೆ. ಸೋಂಕು ಗರ್ಭಿಣಿಯರಿಗೆ ತಗುಲಿದಾಗ ಸಹಜವಾಗಿ ಆತಂಕಕ್ಕೊಳಗಾಗುತ್ತಾರೆ. ಈ ಆತಂಕದ ಮಧ್ಯೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳ ಆರೈಕೆಗಾಗಿ ಪ್ರತ್ಯೇಕ ವಾರ್ಡ್ ಮಾಡಲಾಗಿದೆ. ಈ ಪ್ರತ್ಯೇಕ ವಾರ್ಡ್ನಲ್ಲಿ ಸೋಂಕಿತ ಗರ್ಭಿಣಿಯರಿಗೆ ತಜ್ಞರ ತಂಡ ಸುರಕ್ಷಿತವಾಗಿ ಹೆರಿಗೆ ಮಾಡಿಸುತ್ತಿದೆ.
ಕೊರೊನಾ ಮೊದಲನೇ ಅಲೆಯಲ್ಲಿ ಜಿಲ್ಲೆಯಲ್ಲಿ 100 ಜನ ಗರ್ಭಿಣಿಯರಿಗೆ ಸೋಂಕು ತಗುಲಿತ್ತು. ಆ ಪೈಕಿ 87 ಗರ್ಭಿಣಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿತ್ತು. ಇನ್ನುಳಿಂದಂತೆ ಗುಣಮುಖರಾದ ಬಳಿಕ ಬೇರೆ ಬೇರೆ ಕಡೆ ಹೆರಿಗೆಯಾಗಿದೆ. ಈಗ ಎರಡನೇ ಅಲೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಈವರೆಗೆ 172 ಜನ ಗರ್ಭಿಣಿಯರಿಗೆ ಸೋಂಕು ತಗುಲಿದೆ. ಈ ಪೈಕಿ ಈಗಾಗಲೇ 122 ಜನ ಗರ್ಭಿಣಿಯರಿಗೆ ಹೆರಿಗೆಯಾಗಿದೆ. ಇದರಲ್ಲಿ 54 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, 28 ಜನ ಸೋಂಕಿತ ಗರ್ಭಿಣಿ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗಿದೆ.
ಇನ್ನು ಸೋಂಕಿತ ಗರ್ಭಿಣಿಯರ ಹೆರಿಗೆ ಮಾಡಿಸುವಾಗ ಅತ್ಯಂತ ಜಾಗರೂಕತೆ ಹಾಗೂ ಎಚ್ಚರಿಕೆ ವಹಿಸಲಾಗುತ್ತದೆ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ:ತುಂಬು ಗರ್ಭಿಣಿಯ ಪ್ರಾಣ ತೆಗೆಯಿತು ಕೊರೊನಾ: ಹೊಟ್ಟೆಯಲ್ಲಿದ್ದ ಮಗುವಿನ ಜೀವ ಉಳಿಸಿದ್ರು ವೈದ್ಯರು