ಗಂಗಾವತಿ(ಕೊಪ್ಪಳ): ಸಾರಿಗೆ ಸಂಸ್ಥೆಯ ವಾಹನದಲ್ಲಿ ಆಸನ ಮೀಸಲಿರಿಸಲು ಆನ್ಲೈನ್ ಪೇಮೆಂಟ್ ಮಾಡುವ ವಿಧಾನವಾದ ಫೋನ್ ಪೇ ಮೂಲಕ ಹಣ ಸಂದಾಯ ಮಾಡಿದ ವ್ಯಕ್ತಿಯೊಬ್ಬ ವಂಚಕರ ಜಾಲಕ್ಕೆ ಸಿಕ್ಕು 1.84 ಲಕ್ಷ ಮೊತ್ತದ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಮೂಲತಃ ಬೆಂಗಳೂರಿನವರಾದ ರಮೇಶ ಎಂಬುವವರು ಕಾರಟಗಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಕಳೆದ ಎರಡು ವರ್ಷದಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು 28ರಂದು ತಮ್ಮ ಊರಿಗೆ ಹೋಗುವ ಉದ್ದೇಶಕ್ಕೆ ಗೂಗಲ್ ಸಂಸ್ಥೆಯ ಕ್ರೋಮ್ ಆ್ಯಪ್ಗೆ ಹೋಗಿ ಸಾರಿಗೆ ಸಂಸ್ಥೆಯ ವಾಹನದಲ್ಲಿ ಸೀಟ್ಬುಕ್ ಮಾಡಿದ್ದಾರೆ. ಬುಕ್ ಮಾಡಿದ್ದರ ಶುಲ್ಕ ರೂ. 454 ಮೊತ್ತವನ್ನು ಫೋನ್ ಪೇ ಮೂಲಕ ವರ್ಗಾಯಿಸಲು ಯತ್ನಿಸಿದ್ದಾರೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಸೀಟ್ ಬುಕ್ ಆಗಿಲ್ಲ. ಶಿಕ್ಷಕನ ಬ್ಯಾಂಕ್ ಉಳಿತಾಯ ಖಾತೆಯಿಂದ ಹಣ ಕಡಿತವಾಗಿತ್ತು. ಹಣ ಗ್ರಾಹಕರ ಫೋನ್ ಪೇ ಖಾತೆಯಲ್ಲಿ ಉಳಿದಿತ್ತು.
ಸಹಜವಾಗಿ ಮೂರು ದಿನಗಳ ನಂತರ ಹಣ ವಾಪಸ್ ಬರುತ್ತದೆ ಎಂಬ ವಿಶ್ವಾಸದಲ್ಲಿದ್ದ ಶಿಕ್ಷಕನಿಗೆ ಹಣ ಸಂದಾಯವಾಗಿಲ್ಲ. ಈ ಬಗ್ಗೆ ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ 'ಎನಿ ಡೆಸ್ಕ್ ಆ್ಯಪ್' ಡೌನ್ಲೋಡ್ ಮಾಡಿಕೊಂಡು ಅಲ್ಲಿಂದ ರಿಕ್ವೆಸ್ಟ್ ಕಳಿಸಿ ಎಂದು ಹೇಳಿದ್ದಾರೆ. ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಂತೆ ಗ್ರಾಹಕರ ಗಮನಕ್ಕಿಲ್ಲದಂತೆ ಗಂಗಾವತಿಯ ಎಸ್ಬಿಐ ಬ್ಯಾಂಕಿನ ಉಳಿತಾಯ ಖಾತೆಯಲ್ಲಿದ್ದ 1.30 ಲಕ್ಷ ರೂ. ಬೆಂಗಳೂರಿನ ಫೆಡರಲ್ ಬ್ಯಾಂಕಿನ ಒಂದು ಖಾತೆಯಿಂದ ರೂ. 14,999 ಮತ್ತೊಂದು ಖಾತೆಯಿಂದ ರೂ. 7,999 ಮೊತ್ತವನ್ನು ಖದೀಮರು ಎಗರಿಸಿದ್ದಾರೆ.
ಅಲ್ಲದೇ ಶಿಕ್ಷಕನ ತಾಯಿ ಪ್ರೇಮಾ ಎಂಬುವವರ ಹೆಸರಲ್ಲಿ ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ಎಸ್ಬಿಐ ಬ್ಯಾಂಕಿನ ಉಳಿತಾಯ ಖಾತೆಯಿಂದ ರೂ. 33,001 ಹೀಗೆ ಒಟ್ಟು 1,83,983 ಮೊತ್ತದ ಹಣವನ್ನು ದೋಚಿದ್ದಾರೆ. ಇದೀಗ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ