ಗಂಗಾವತಿ: ಸಕ್ಕಿಂಗ್ ಯಂತ್ರದ ಮೂಲಕ ರಸ್ತೆಯಲ್ಲಿದ್ದ ಧೂಳು ಸಂಗ್ರಹಿಸಲು ಮುಂದಾದ ನಗರಸಭೆಯ ಮೂವರು ನೌಕರರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಆನಂದ್ ಚಲವಾದಿ, ಹುಲ್ಲೇಶ ಗುಗ್ರಿ ಎಂಬ ಇಬ್ಬರು ನೌಕರರು ಗಾಯಗೊಂಡಿದ್ದು, ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ರಸ್ತೆಗಳ ಮೇಲೆ ಸಂಗ್ರಹವಾಗುವ ಧೂಳು ನಿಯಂತ್ರಿಸುವ ಉದ್ದೇಶಕ್ಕಾಗಿ ನಗರಸಭೆ ಇತ್ತಿಚೆಗೆ ಸಕ್ಕಿಂಗ್ ಯಂತ್ರ ಖರೀದಿಸಿದೆ. ಪೌರನೌಕರರಾದ ಆನಂದ್ ಚಲವಾದಿ, ಹುಲ್ಲೇಶ ಗುಗ್ರಿ ಮತ್ತು ಪ್ರಕಾಶ ಈ ಯಂತ್ರದಿಂದ ಧೂಳು ಸಂಗ್ರಹಿಸಲು ಭಗೀರಥ ವೃತ್ತಕ್ಕೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ರಸ್ತೆಯ ಮೇಲಿದ್ದ ಮಣ್ಣನ್ನು ಸ್ಥಳಾಂತರಿಸುವ ಸಮಯದಲ್ಲಿ ಧೂಳು ಹೆಚ್ಚಾಗಿದೆ. ಇದರಿಂದ ಕೋಪಗೊಂಡ ಅಲ್ಲಿದ್ದ ಜನರ ಗುಂಪೊಂದು ಏಕಾಏಕಿ ಹಲ್ಲೆ ಮಾಡಿದೆ. ಈ ಸಂಬಂಧ ಹನುಮೇಶ ಹರಿಜನ ಹಾಗೂ ಇತರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಅಮಾನುಷ ಹಲ್ಲೆ: ಪ್ರಾಧ್ಯಾಪಕ ಅರೆಸ್ಟ್