ಕುಷ್ಟಗಿ(ಕೊಪ್ಪಳ): ಇಂತಹ ವಿಷಮ ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಗೃಹರಕ್ಷಕರು, ಪೌರಕಾರ್ಮಿಕರಿಗೆ ಸಾರ್ವಜನಿಕರು ಪುಷ್ಪವೃಷ್ಟಿ, ಆರತಿ ಬೆಳಗುವ ಮೂಲಕ ಗೌರವ ಸೂಚಿಸಿದರು.
ಕುಷ್ಟಗಿಯಲ್ಲಿ ನಡೆದ ಕೊರೊನಾ ಜಾಗೃತಿ ಪಥಸಂಚಲನದಲ್ಲಿ ಎಲ್ಲಾ ಸೇವಾ ಸಿಬ್ಬಂದಿಗೆ ಈ ಗೌರವ ಸೂಚಿಸಲಾಯಿತು. ಇದರಿಂದ ನಗರದಲ್ಲಿ ಕೊರೊನಾ ಭೀತಿಯ ಮಧ್ಯೆ ಹಬ್ಬದ ವಾತವರಣ ಕಂಡು ಬಂತು.
ತಹಶೀಲ್ದಾರ್ ಎಂ.ಸಿದ್ದೇಶ, ಸಿಪಿಐ ಚಂದ್ರಶೇಖರ ಜಿ., ಪಿಎಸ್ಐ ಚಿತ್ತರಂಜನ್ ನಾಯಕ್, ತಾಲೂಕು ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಕಾಂತ ಮಂತ್ರಿ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್ ನೇತೃತ್ವದಲ್ಲಿ ಪಟ್ಟಣದಲ್ಲಿ ಸಾಮಾಜಿಕ ಅಂತರದಲ್ಲಿ ಪಥಸಂಚಲನ ನಡೆಸಲಾಯಿತು. ಇದೇ ವೇಳೆ ದಾರಿಯುದ್ಧಕ್ಕೂ ಸಾರ್ವಜನಿಕರು ಪುಷ್ಪವೃಷ್ಟಿಗೈದು, ಆರತಿ ಬೆಳಗಿ ಕೊರೊನಾ ವೈರಸ್ ತೊಲಗಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಸೇವಕರ ಸೇವೆ ಯಶಸ್ವಿಗೆ ಹಾರೈಸಿ, ವಿಜಯದ ತಿಲಕ ಹಚ್ಚಿದರು.
ಪಥಸಂಚಲನ ಪಟ್ಟಣದಲ್ಲಿ ಸಂಚರಿಸಿ ಕೊನೆಗೆ ತಹಶೀಲ್ದಾರ್ ಕಚೇರಿ ಬಳಿ ಸಮಾಪ್ತಿಗೊಂಡಿತು. ಇದೇ ವೇಳೆ ಶ್ರೀ ದುರ್ಗಾ ಪರಮೇಶ್ವರ ಶ್ರೀ ಸದಾನಂದ ಮಹಾರಾಜ್ ಅವರು ಕೊರೊನಾ ವಾರಿಯರ್ಸ್ ಮುಖ್ಯಸ್ಥರಿಗೆ ರಾಷ್ಟ್ರ ಲಾಂಚನ ನೀಡಿ ಸತ್ಕರಿಸಿದರು. ಸಾರ್ವಜನಿಕರು ಮನೆಯಲ್ಲಿ ಇದ್ದು ಸಹಕರಿಸಬೇಕೆಂದು ತಹಶೀಲ್ದಾರ್ ಸಿದ್ದೇಶ್ ಮನವಿ ಮಾಡಿಕೊಂಡರು.