ಕುಷ್ಟಗಿ (ಕೊಪ್ಪಳ): ಕೋವಿಡ್ ಕೇರ್ ಸೆಂಟರ್‌ಗೆ ಕರೆದೊಯ್ಯುತ್ತಾರೆ ಎಂದು ಆತಂಕಗೊಂಡ ಸೋಂಕಿತರೊಬ್ಬರು ಹೆದರಿ ಗುಡ್ಡ ಸೇರಿದ ಘಟನೆ ಹಿರೇಮನ್ನಾಪೂರದಲ್ಲಿ ನಡೆದಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವೈರಸ್ ವ್ಯಾಪಿಸುವುದನ್ನು ನಿಯಂತ್ರಿಸಲು ಹೋಂ ಐಸೋಲೇಶನ್ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್‌ಗೆ ಬರಲು ನಿರಾಕರಿಸುವವರ ಮನವೊಲಿಸಿ ಅವರನ್ನು ಶಿಫ್ಟ್ ಮಾಡಲಾಗುತ್ತಿದೆ.
ಹಿರೇಮನ್ನಾಪೂರ ಗ್ರಾಮದಲ್ಲಿ ಪಿಎಸೈ ತಿಮ್ಮಣ್ಣ ನಾಯಕ್, ತಾ.ಪಂ.ಇಓ ತಿಮ್ಮಪ್ಪ ಹೋಂ ಐಸೋಲೇಶನ್ನಲ್ಲಿದ್ದ ಕೊರೊನಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆ ತರಲು ಮುಂದಾದರು. ಇದರ ಸುಳಿವರಿತ ವ್ಯಕ್ತಿಯೊಬ್ಬ ಹಿರೇಮನ್ನಪೂರ ಪಕ್ಕದ ಗುಡ್ಡದ ಪಕ್ಕದಲ್ಲಿ ಅಡಗಿ ಕುಳಿತಿದ್ದು, ಆತನನ್ನು ಪೊಲೀಸರು ಪತ್ತೆ ಹಚ್ಚಿದರು.
ಹೋಂ ಐಸೋಲೇಶನ್ನಿಂದ ಇತರರಿಗೂ ಕೊರೊನಾ ಸೋಂಕು ಹಬ್ಬುವ ಸಾಧ್ಯತೆ ಇದೆ. ನಿಮ್ಮಿಂದ ಇಡೀ ಕುಟುಂಬಕ್ಕೆ ರೋಗ ಹರಡಲಿದ್ದು, ಅವರೂ ಸಹ ತೊಂದರೆಗೆ ಒಳಗಾಗುತ್ತಾರೆ. ಮುನ್ನೆಚ್ಚರಿಕೆಯಿಂದಾಗಿ ನೀವು ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಆಗಬೇಕು. ಈ ಮೂಲಕ ನಿಮ್ಮ ಕುಟುಂಬಸ್ಥರ ಆರೋಗ್ಯ ಮತ್ತು ನಿಮ್ಮ ಆರೋಗ್ಯವನ್ನೂ ಕಾಪಾಡಿದಂತಾಗುತ್ತದೆ ಎಂದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತನಿಗೆ ತಿಳುವಳಿಕೆ ಹೇಳಿದರು. ಬಳಿಕ ಆ ವ್ಯಕ್ತಿಯನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆದೊಯ್ಯಲಾಯಿತು.
ಪಿಎಸೈ ತಿಮ್ಮಣ್ಣ ನಾಯಕ್ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿ, ಹಿರೆಮನ್ನಾಪೂರದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಹೋಂ ಐಸೋಲೇಶನ್ನಲ್ಲಿದ್ದ 11 ಜನರನ್ನು ಕೇರ್ ಸೆಂಟರ್‌ಗೆ ತರಲಾಗಿದೆ ಎಂದರು.