ಕೊಪ್ಪಳ: ಕುಟುಂಬದ ಅತ್ಯಂತ ಪ್ರೀತಿ ಪಾತ್ರರು ಅಗಲಿದಾಗ ಆಗುವ ನೋವು ಹೇಳತೀರದು. ಸದಾ ಅವರ ನೆನಪು ಕಾಡುತ್ತಲೇ ಇರುತ್ತದೆ. ಆದರೂ ಅಗಲಿದವರ ನೆನಪು ಸದಾ ಹಸಿರಾಗಿಟ್ಟುಕೊಳ್ಳಲು ಹಾಗೂ ಅವರ ಉಪಸ್ಥಿತಿಯ ಭಾವನಾತ್ಮಕತೆ ಜೀವಂತವಾಗಿಡಲು ಕೆಲವರು ಹಲವು ರೀತಿ ಪ್ರಯತ್ನಿಸುತ್ತಾರೆ.
ಉದ್ಯಮಿಯೊಬ್ಬರು ಅಗಲಿದ ತಮ್ಮ ಪತ್ನಿಯ ಪುತ್ಥಳಿಯನ್ನು ಮಾಡಿಸಿದ್ದಾರೆ. ಆ ಪ್ರತಿಮೆ ನೋಡಿದರೆ ಥೇಟ್ ಅವರೇ ಜೀವಂತವಾಗಿ ಕುಳಿತಿದ್ದಾರೇನೋ ಎಂಬಂತೆ ಭಾಸವಾಗುತ್ತದೆ. ಅವರ ಪರಿಚದವರು ನೋಡಿದ್ರೇ ಆ ಮನೆಯ ಒಡತಿಯೇ ಜೀವಂತವಾಗಿ ಕುಳಿತಿದ್ದಾರೇನೋ ಎಂದು ಹೇಳೋದು ಗ್ಯಾರಂಟಿ. ಅಷ್ಟೊಂದು ಜೀವಂತಿಕೆ ಇದೆ ಈ ಪುತ್ಥಳಿಯಲ್ಲಿ. ಜೀವವೊಂದನ್ನು ಬಿಟ್ಟು ಎಲ್ಲ ಭಾವನಾತ್ಮಕ ಜೀವಂತಿಕೆಯನ್ನು ಈ ಪ್ರತಿಮೆ ಹೊಂದಿದೆ.
ಈ ಪ್ರತಿಮೆಯು ದಿ. ಕೆವಿಎನ್ ಮಾಧವಿ ಅವರದು. ಕೊಪ್ಪಳದ ಭಾಗ್ಯನಗರ ಪಟ್ಟಣದ ನಿವಾಸಿಯಾಗಿರುವ ಉದ್ಯಮಿ ಕೆ. ಶ್ರೀನಿವಾಸ್ ಗುಪ್ತಾ ಅವರ ಪತ್ನಿ ಕೆವಿಎನ್ ಮಾಧವಿ ಅವರು, ಮೂರ್ತಿ ರೂಪದಲ್ಲಿ ಈಗ ಅವರ ಮನೆಗೆ ಬಂದಿದ್ದಾರೆ. ಉದ್ಯಮಿ ಶ್ರೀನಿವಾಸ್ ಗುಪ್ತಾ ಅವರು ತಮ್ಮ ಪತ್ನಿಯನ್ನು ಈ ಪುತ್ಥಳಿಯ ಮೂಲಕ ಭಾವನಾತ್ಮಕವಾಗಿ ಜೀವಂತವಾಗಿರಿಸಿದ್ದಾರೆ.
ಮಾಧವಿ ಅವರು 2017 ಜುಲೈ 5 ರಂದು ತಿರುಪತಿಗೆ ಕಾರ್ನಲ್ಲಿ ತೆರಳುತ್ತಿದ್ದಾಗ ಕೋಲಾರ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಕೊಪ್ಪಳದ ರೇಲ್ವೇ ಗೇಟ್ ಬಳಿ ಇರುವ ಅವರ ಅಪಾರ್ಟ್ಮೆಂಟ್ ಬಳಿ ಹೊಸದೊಂದು ಮನೆ ಕಟ್ಟಿಸಬೇಕು ಎಂಬ ಆಸೆಯನ್ನು ಅವರು ಹೊಂದಿದ್ದರಂತೆ. ಮನೆಯ ನೀಲನಕ್ಷೆಯನ್ನು ಅವರೇ ಹಾಕಿಸಿದ್ದರಂತೆ. ಇದಾದ ಬಳಿಕ ಅವರು ಅಪಘಾತದಲ್ಲಿ ಮೃತಪಟ್ಟಿದ್ದರು.
ಹೊಸಮನೆ ಕಟ್ಟಿಸಬೇಕು ಎಂಬ ಅವರ ಆಸೆಯಂತೆ ಹೊಸಮನೆಯನ್ನು ಕಟ್ಟಿಸಿರುವ ಗುಪ್ತಾ ಅವರು, ಕಳೆದ ಮೂರು ದಿನಗಳ ಹಿಂದೆ ಮನೆಯ ಓಪನಿಂಗ್ ಮಾಡಿದ್ದಾರೆ. ಪತ್ನಿ ಆಸೆಪಟ್ಟಿದ್ದ ಮನೆಯಲ್ಲಿಯೇ ಅವರ ನೆನಪು, ಭಾವನಾತ್ಮಕ ಉಪಸ್ಥಿತಿ ಇರಲಿ ಎಂಬ ಮಹದಾಸೆಯಿಂದ ಅಗಲಿದ ತಮ್ಮ ಪತ್ನಿಯ ಪುತ್ಥಳಿ ಮಾಡಿಸಿದ್ದಾರೆ.
ಬೆಂಗಳೂರಿನಲ್ಲಿರುವ ಬೊಂಬೆ ಮನೆಯ ಶ್ರೀಧರಮೂರ್ತಿ ಎಂಬ ಕಲಾವಿದರ ಕೈಚಳಕದಲ್ಲಿ ಪುತ್ಥಳಿ ಜೀವಂತಿಕೆ ಪಡೆದುಕೊಂಡಿದ್ದು, ಮೊದಲು ಮೇಣದ ಪ್ರತಿಮೆ ಮಾಡಿಸುವ ಯೋಚನೆ ಇತ್ತು. ಆದರೆ ಅದಕ್ಕಿಂತಲೂ ಉತ್ತಮವಾದ ಸಿಲಿಕಾನ್ ಇಂಪೋರ್ಟೆಡ್ ಮಟಿರಿಯಲ್ ಬಳಸಿ ಈ ಪುತ್ಥಳಿ ತಯಾರಿಸಲಾಗಿದೆ. ಜೀವಂತ ಮಾಧವಿಯವರೇ ಕುಳಿತಿದ್ದರೇನೋ ಎನ್ನುವಂತಿದೆ ಆ ಪುತ್ಥಳಿ. ಇನ್ನು ವಿಶೇಷವೇನೆಂದರೆ ಜೀವಂತ ಮನುಷ್ಯರಂತೆಯೇ ಬೆರಳುಗಳು ಫ್ಲೆಕ್ಸಿಬಲ್ ಇವೆ. ಸುಮಾರು 15 ರಿಂದ 20 ಕೆಜಿ ತೂಕವಿರುವ ಈ ಪುತ್ಥಳಿ ಜೀವಂತಿಕೆಯೇ ಮೈದಳೆದಿದೆ. ಇನ್ನು ಅವರ ನಿಜವಾದ ಕೂದಲಗಳನ್ನು ಬಳಸಿಕೊಂಡು ಈ ಪ್ರತಿಮೆಗೆ ವಿಗ್ ತಯಾರಿಸಿ ಹಾಕಲಾಗಿದೆ.
ಶ್ರೀನಿವಾಸ್ ಗುಪ್ತಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ತಾಯಿಯ ಅಗಲಿಕೆಯನ್ನು ಅರಗಿಸಿಕೊಳ್ಳಲು ಆಗದ ಈ ಮಕ್ಕಳಿಗೆ, ಈಗ ತಾಯಿ ರೂಪದಲ್ಲಿರುವ ಈ ಪುತ್ಥಳಿಯಿಂದ ಮರಳಿ ತಮ್ಮ ತಾಯಿಯೇ ಮನೆಗೆ ಬಂದಿದ್ದಾಳೆ ಎಂಬ ಭಾವದಲ್ಲಿದ್ದಾರೆ. ನಮ್ಮ ತಾಯಿ ಎಲ್ಲೂ ಹೋಗಿಲ್ಲ. ಈ ಪುತ್ಥಳಿಯ ಮೂಲಕ ನಮ್ಮ ಮನೆಯಲ್ಲಿಯೇ ಇದ್ದಾಳೆ. ಹೀಗಾಗಿ ಅವರೊಂದಿಗೆ ನಾವು ಇರುತ್ತೇವೆ. ಜೀವಂತವಾಗಿರುವ ತಾಯಿಯಂತೆಯೇ ತಾಯಿಯವರ ಮೂರ್ತಿ ತಯಾರಿಸಿಕೊಟ್ಟಿದ್ದಾರೆ ಎಂದು ಶಿಲ್ಪಿಗಳಿಗೆ ಕೃತಜ್ಞತೆ ಸಲ್ಲಿಸುತ್ತಾರೆ ಶ್ರೀನಿವಾಸ್ ಗುಪ್ತಾ ಅವರ ಮಕ್ಕಳು.
ಈ ಮೂರ್ತಿ ತಯಾರಿಸಲು ಒಂದು ವರ್ಷವನ್ನು ತೆಗೆದುಕೊಳ್ಳಲಾಗಿದ್ದು, ಮಾಧವಿ ಅವರು ಬದುಕಿದ್ದಾಗ ಹೇಗಿದ್ದರೋ ಅದೇ ರೀತಿಯಲ್ಲಿ ಈ ಪುತ್ಥಳಿಗೆ ಜೀವಂತಿಕೆ ಬರುವಂತೆ ಮಾಡಿದ್ದಾರೆ ಕಲಾವಿದರು. ಶ್ರೀನಿವಾಸ್ ಗುಪ್ತಾ ಅವರ ನೂತನ ಮನೆಯಲ್ಲಿರುವ ಅವರ ಪತ್ನಿಯ ಸಿಲಿಕಾನ್ ಇಂಪೋರ್ಟೆಡ್ ಮಟೀರಿಯಲ್ನ ಈ ಪುತ್ಥಳಿ ಗುಪ್ತಾ ಕುಟುಂಬಕ್ಕೆ ಬೆಲೆ ಕಟ್ಟಲಾಗದ್ದಾಗಿದೆ. ಅಗಲಿದ ಪ್ರೀತಿ ಪಾತ್ರರನ್ನು ಜೀವಂತವಾಗಿಡುವ ಪ್ರಯತ್ನದಲ್ಲಿ ಇದು ಸಹ ಒಂದಾಗಿದ್ದು ಗಮನ ಸೆಳೆಯುತ್ತಿದೆ.