ಗಂಗಾವತಿ: ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ಮಕ್ಕಳ ಕಲಿಕೆಗೆ ಪೂರಕವಾಗಲಿ ಎಂಬ ಕಾರಣಕ್ಕೆ ನಗರದ ಉದ್ಯಮಿಯೊಬ್ಬರು ಲಕ್ಷ-ಲಕ್ಷ ವೆಚ್ಚ ಮಾಡಿ ಅರಿವು ಎಂಬ ಶೈಕ್ಷಣಿಕ ಅಪ್ಲಿಕೇಶನ್ ಉಚಿತವಾಗಿ ಬಿಡುಗಡೆ ಮಾಡಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ನೆಕ್ಕಂಟಿ ಸೂರಿಬಾಬು ಎಂಬ ಉದ್ಯಮಿ, ಸರ್ಕಾರಿ ಶಾಲೆಯ ಮಕ್ಕಳು ಅದರಲ್ಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ಅರಿವು ಎಂಬ ಆ್ಯಪ್ನ್ನು ಡೆವಲಪ್ ಮಾಡಿಸಿದ್ದಾರೆ.
ಕನ್ನಡದ ಮೇಲಿನ ಅಭಿಮಾನ ಹಾಗೂ ಕೊಪ್ಪಳ ಜಿಲ್ಲೆಯ ಮಕ್ಕಳು ಶೈಕ್ಷಣಿಕವಾಗಿ ರಾಜ್ಯದಲ್ಲಿ ಉನ್ನತ ಸಾಧನೆ ಮಾಡಲಿ ಎಂಬ ಉದ್ದೇಶವಿಟ್ಟುಕೊಂಡು ಆರು ಲಕ್ಷ ವ್ಯಯಿಸಿ ಈ ಆ್ಯಪ್ನ್ನು ಅಭಿವೃದ್ಧಿ ಪಡಿಸಿದ್ದಾಗಿ ನೆಕ್ಕಂಟಿ ಸೂರಿಬಾಬು ಹೇಳಿದರು.
ತಾಲ್ಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿ, ಜಿಲ್ಲೆಯಲ್ಲಿ 23,200 10ನೇ ತರಗತಿಯ ಮಕ್ಕಳಿದ್ದಾರೆ. ಈ ಪೈಕಿ ಮೂರು ಸಾವಿರ ಆಂಗ್ಲ ಮಾಧ್ಯಮದ ಮಕ್ಕಳಿದ್ದಾರೆ. 20 ಸಾವಿರ ಕನ್ನಡ ಮಾಧ್ಯಮದ ಮಕ್ಕಳಿದ್ದು, ಅವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಆಪ್ ಬಿಡುಗಡೆ ಮಾಡಲಾಗಿದೆ ಎಂದರು.
ಗೂಗಲ್ ಪ್ಲೇ ಸ್ಟೋರ್ನಿಂದ ಅರಿವು ಎಂಬ ಆ್ಯಪ್ನ್ನು ಮಕ್ಕಳು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಏಕಕಾಲಕ್ಕೆ 25 ಸಾವಿರ ಮಕ್ಕಳು ಆಪ್ ಮೂಲಕ ಶೈಕ್ಷಣಿಕ ಮಾಹಿತಿ ಪಡೆದುಕೊಳ್ಳಬಹುದು. ಅಪ್ಲಿಕೇಷನ್ ಒಳಗೆ ಹೋದರೆ ವಿಷಯವಾಗಿ ವಿಭಾಗ ಮಾಡಲಾಗಿದ್ದು, ಬಳಿಕ ಪಠ್ಯದ ಮೇಲೆ ಕ್ಲಿಕ್ ಮಾಡಿದರೆ ಕಂಟೆಂಟ್ ತೆರೆದುಕೊಳ್ಳುತ್ತದೆ.