ಕೊಪ್ಪಳ: ಇತ್ತೀಚೆಗೆ ಜನತೆ ವಿದ್ಯುತ್ ಚಾಲಿತ ವಾಹನಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಕೆಲವರು ತಾವೇ ಸಣ್ಣ ಮಟ್ಟದ ವಾಹನಗಳನ್ನು ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಇಲ್ಲೊಬ್ಬ ಬಾಲಕ ಸಹ ಮನೆಯಲ್ಲಿಯೇ ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿ ಹುಬ್ಬೇರಿಸುವಂತೆ ಮಾಡಿದ್ದಾನೆ. ಅಚ್ಚರಿ ಏನಂದ್ರೆ ಸೈಕಲ್ ತಯಾರಿಸಿದ ಈ ಬಾಲಕನಿಗೆ ಇನ್ನೂ 15 ವರ್ಷ.
ಹೌದು, ಕೊಪ್ಪಳ ನಗರದ ಬಾಳೇಶ ವಿಶ್ವನಾಥ ಹಿರೇಮಠ ಎಂಬ ಬಾಲಕ ಗುಜರಿ ವಸ್ತುಗಳನ್ನು ಬಳಸಿ ಈ ಸೈಕಲ್ ತಯಾರಿಸಿದ್ದಾನೆ. ನಗರದ ಶ್ರೀ ಶಿವಶಾಂತವೀರ ಪಬ್ಲಿಕ್ ಸ್ಕೂಲ್ನಲ್ಲಿ 8ನೇ ತರಗತಿ ಅಭ್ಯಾಸ ಮಾಡುತ್ತಿರುವ ಈತ ಸುಮಾರು 8-9 ಸಾವಿರ ರುಪಾಯಿ ಖರ್ಚು ಮಾಡಿ ಲ್ಯಾಪ್ಟಾಪ್ ಬ್ಯಾಟರಿಗಳು ಹಾಗೂ ಇನ್ನಿತರೆ ಗುಜರಿ ವಸ್ತುಗಳನ್ನು ಬಳಸಿಕೊಂಡು ತನ್ನದೇ ಮಾಡೆಲ್ನ ಎಲೆಕ್ಟ್ರಿಕಲ್ ಬೈಸಿಕಲ್ ರೆಡಿ ಮಾಡಿದ್ದಾನೆ.
ಎರಡು ಗಂಟೆ ಚಾರ್ಜ್ ಮಾಡಿದರೆ ಸುಮಾರು 50 ಕಿಲೋ ಮೀಟರ್ ಪ್ರಯಾಣ ಮಾಡಬಹುದಾಗಿದೆ. ಹಳೆಯ ಎರಡು ಆ್ಯಸಿಡ್ ಬ್ಯಾಟರಿಗಳನ್ನು ಬಳಸಿಕೊಂಡು ಅದರಲ್ಲಿ ಲ್ಯಾಪ್ಟಾಪ್ ಬ್ಯಾಟರಿಯ ಲಿಥೇನಿಯಂನ 24 ಶೆಲ್ಗಳನ್ನು ಅಳವಡಿಸಿದ್ದಾನೆ.
ಹಿಂದಿನ ಚಕ್ರಕ್ಕೆ ಟೈಲರಿಂಗ್ ಮೋಟರ್ ಅಳವಡಿಸಲಾಗಿದೆ. ಗಂಟೆಗೆ 25 ಕಿಲೋ ಮೀಟರ್ ಸ್ಪೀಡ್ನಲ್ಲಿ ಬೈಸಿಕಲ್ ಓಡುವಂತೆ ಮಾಡಿದ್ದಾನೆ. ಬ್ಯಾಟರಿ ಚಾರ್ಜ್ ಎಷ್ಟಿದೆ ಎಂದು ಇಂಡಿಕೇಟ್ ಮಾಡುವ ಸಾಧನ, ಲೈಟ್ ಅಳವಡಿಸಲಾಗಿದೆ.
ಲಾಕ್ಡೌನ್ ಸಮಯದಲ್ಲಿ ಹೊಳೆದ ಆಲೋಚನೆಯಂತೆ ಎಲೆಕ್ಟ್ರಿಕಲ್ ಬೈಸಿಕಲ್ ತಯಾರಿಸಿದ್ದೇನೆ ಎನ್ನುತ್ತಾನೆ ಬಾಲಕ ಬಾಳೇಶ ಹಿರೇಮಠ. ಇನ್ನು ಬಾಲಕನ ವಯಸ್ಸಿಗೂ, ಮಾಡುತ್ತಿರುವ ವ್ಯಾಸಂಗಕ್ಕೂ ಸಂಬಂಧವಿಲ್ಲದ ಸಂದರ್ಭದಲ್ಲಿ ಎಲೆಕ್ಟ್ರಿಕಲ್ ಬೈಸಿಕಲ್ ತಯಾರಿಸಿರೋದು ಹುಬ್ಬೇರುವಂತೆ ಮಾಡಿದೆ.
ಈ ಕುರಿತು ಬಾಲಕನ ತಂದೆ ಸಂತಸ ವ್ಯಕ್ತಪಡಿಸಿದ್ದು, 10-12 ರೂಪಾಯಿ ಖರ್ಚಿನಲ್ಲಿ 50 ಕಿಲೋ ಮೀಟರ್ ಪ್ರಯಾಣಿಸಬಹುದು. ಮಗನ ಈ ಆವಿಷ್ಕಾರದ ಮನೋಭಾವ ಹಾಗೂ ಬುದ್ಧಿವಂತಿಕೆ ನಿಜಕ್ಕೂ ಬೆರಗುಗೊಳಿಸುತ್ತದೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಯ ತಂದೆಯಿಂದ ಕಿಡ್ನಾಪ್ ಕೇಸ್ ದಾಖಲು