ಕೊಪ್ಪಳ: ನಿನ್ನೆ ಬಿರುಗಾಳಿ ಸಹಿತ ಹಲವೆಡೆ ಮಳೆಯಾಗಿದೆ. ಕುಷ್ಟಗಿಯ ನಿಡಶೇಸಿ ಕೆರೆಯಲ್ಲಿ ಗಾಳಿ ತನ್ನ ರೌದ್ರರೂಪವನ್ನು ತೋರಿಸಿದ್ದು, ಸುಮಾರು 40 ಎಕರೆ ಭೂಮಿಯಲ್ಲಿ ಬೆಳೆದಿದ್ದ ಮಾವು ಬೆಳೆ ಮಣ್ಣು ಪಾಲಾಗಿದೆ.
ಕುಷ್ಟಗಿ ತಾಲೂಕಿನ ವಿವಿಧೆಡೆ ಗಾಳಿ ಸಹಿತ ಮಳೆಯಾಗಿದೆ. ಈ ಸಂದರ್ಭದಲ್ಲಿ ನಿಡಶೇಸಿ ಕೆರೆಯಲ್ಲಿ ಗಾಳಿ ರೌದ್ರಾವತಾರ ತಾಳಿದ ದೃಶ್ಯವನ್ನು ಸ್ಥಳದಲ್ಲಿದ್ದ ಟಿಪ್ಪರ್ ಚಾಲಕರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಬಿಳಿ ಬಣ್ಣದ, ಮಂಜಿನ ಹಾಗೆ ಕಾಣುವ ಧೂಳಿನೊಂದಿಗೆ ಗಾಳಿ ಸೇರಿಕೊಂಡು ರಭಸದಿಂದ ಬರುವ ಅದ್ಭುತ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಗಾಳಿನ ನೈಜಮುಖ ಕಾಣದಿದ್ದರೂ ಸಹ ಅದು ಬೇರೆ ವಸ್ತುಗಳೊಂದಿಗೆ ಸೇರಿಕೊಂಡು ತನ್ನ ಉಗ್ರ ಸ್ವರೂಪ ತೋರ್ಪಡಿಸುವ ಮೂಲಕ ಜನರನ್ನು ತಬ್ಬಿಬ್ಬಾಗಿಸಿದೆ. ಇನ್ನು ಬಿರುಗಾಳಿಗೆ ಕಲಕಬಂಡಿ ಸೀಮಾದಲ್ಲಿರುವ ಬಾಬೂಜಿ ಎಂಬುವರ ಸುಮಾರು 40 ಎಕರೆ ಜಮೀನಿನಲ್ಲಿ ಮಾವಿನ ತೋಟಕ್ಕೆ ಹಾನಿಯಾಗಿದೆ. ಬಿರುಗಾಳಿಯ ಹೊಡೆತಕ್ಕೆ ಮಾವಿನ ಕಾಯಿಗಳು ನೆಲಕ್ಕೆ ಉದುರಿ ಬಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.