ಕೋಲಾರ : ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ತನ್ನ ಪತ್ನಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅಮರಾವತಿ ಬಡಾವಣೆಯಲ್ಲಿ ನಡೆದಿದೆ. ನಂದಿನಿ(34) ಮೃತ ದುರ್ದೈವಿ. ಕೊಲೆ ಮಾಡಿದ ಆರೋಪಿ ನಾಗರಾಜ್ನನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಒಂದೆಡೆ ಮೃತ ಮಗಳನ್ನು ನೆನೆದು ಕಣ್ಣೀರು ಹಾಕುತ್ತಿರುವ ಪೋಷಕರು, ಮತ್ತೊಂದೆಡೆ ಕೊಲೆಯಾಗಿರುವ ಸ್ಥಳವನ್ನು ವೀಕ್ಷಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಇನ್ನೊಂದೆಡೆ ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿರುವ ಬಂಗಾರಪೇಟೆ ಪೊಲೀಸರು. ಈ ದೃಶ್ಯಗಳು ಕಂಡು ಬಂದಿದ್ದು, ಜಿಲ್ಲೆಯ ಬಂಗಾರಪೇಟೆ ಅಮರಾವತಿ ಬಡಾವಣೆಯಲ್ಲಿ.
ಇಲ್ಲಿನ ಅತ್ತಿಗಿರಿ ಕೊಪ್ಪ ಗ್ರಾಮದ ನಾಗರಾಜ್ ತನ್ನ ಅಕ್ಕನ ಮಗಳು ನಂದಿನಿಯನ್ನು ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದ. ಅಲ್ಲದೇ ಈ ದಂಪತಿಗಳಿಗೆ ಮೂರು ಮಕ್ಕಳಿದ್ದಾರೆ. ಕುಡಿತಕ್ಕೆ ದಾಸನಾಗಿದ್ದ ನಾಗರಾಜ್ ಮದುವೆಯಾದ ಬಳಿಕ ಕ್ಯಾತೆ ತೆಗೆಯಲು ಶುರುಮಾಡಿದ್ದ. ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ದಂಪತಿ ಗಲಾಟೆ ಸಂಬಂಧ ನಂದಿನಿ ಪೋಷಕರು ಹಲವು ಬಾರಿ ನ್ಯಾಯ ಪಂಚಾಯಿತಿ ನಡೆಸಿದ್ದರು. ಅಷ್ಟೇ ಅಲ್ಲದೆ ಅಮರಾವತಿ ಬಡಾವಣೆಯ ಡಿ.ಕೆ.ರವಿ ವೃತ್ತದ ಬಾಡಿಗೆ ಮನೆಗೆ ತಮ್ಮ ವಾಸವನ್ನು ಬದಲಾಯಿಸಿದ್ದರು. ಇನ್ನು ಗಂಡನ ಸಂಪಾದನೆ ಸಾಕಾಗಲ್ಲ ಎನ್ನುವ ಕಾರಣಕ್ಕೆ ನಂದಿನಿ ಕೂಡ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ವೇಳೆ, ನಾಗರಾಜ್‌ಗೆ ತನ್ನ ಪತ್ನಿಯ ನಡವಳಿಕೆ ಮೇಲೆ ಅನುಮಾನವಿತ್ತು.
ಮೃತ ನಂದಿನಿ ಕೋಲಾರದ ನರಸಾಪುರದ ಬಳಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ನಾಗರಾಜ್ ಬಂಗಾರಪೇಟೆ ಎಪಿಎಂಸಿ ಯಾರ್ಡ್ ನಲ್ಲಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದ. ಪತಿಯ ಕಿರುಕುಳದಿಂದ ಬೇಸತ್ತಿದ್ದ ನಂದಿನಿ ತನ್ನ ಪೋಷಕರಲ್ಲಿ ಈ ಬಗ್ಗೆ ಹೇಳಿದ್ದರು. ಆದರೆ, ನಂದಿನಿ ಪೋಷಕರು, ಸಂಸಾರ ಎಂದ ಮೇಲೆ ಇಂತಹ ಆರೋಪಗಳು ಸಾಮಾನ್ಯ ಎಂದು ಬುದ್ಧಿವಾದ ಹೇಳಿದ್ದರು.
ನಿನ್ನೆ ನಾಗರಾಜ್ ತನ್ನ ಮೂರು ಜನ ಮಕ್ಕಳನ್ನು ಮುಳಬಾಗಿಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮದ ಅತ್ತೆ ಮನೆಯಲ್ಲಿ ಬಿಟ್ಟು ಬಂದಿದ್ದಾನೆ. ಅಲ್ಲಿಂದ ವಾಪಸ್ ಬರುವ ವೇಳೆ ಹೊಸ ಮಚ್ಚು ಖರೀದಿ ಮಾಡಿದ್ದ ನಾಗರಾಜ್ ಕಳೆದ ರಾತ್ರಿ ಎಂದಿನಂತೆ ಮತ್ತೆ ಕ್ಯಾತೆ ತೆಗೆದಿದ್ದಾನೆ. ಇಬ್ಬರ ಜಗಳ ತಾರಕಕ್ಕೇರಿದ್ದು, ಈ ವೇಳೆ, ನಾಗರಾಜ್ ಪತ್ನಿ ನಂದಿನಿ ಮೇಲೆ ಮಚ್ಚಿನಿಂದ ಮುಖ ಹಾಗೂ ಕತ್ತಿಗೆ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ನಂದಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಸ್ಥಳಕ್ಕೆ ಕೆಜಿಎಫ್ ಎಸ್ಪಿ ಧರಣಿ ದೇವಿ, ಡಿವೈಎಸ್‌ಪಿ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಸದ್ಯ ಆರೋಪಿ ನಾಗರಾಜ್ನನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಪತ್ನಿ ಕೊಲೆ.. ಹಳ್ಳದಲ್ಲಿ ಗುಂಡಿ ತೋಡಿ ಗರ್ಭಿಣಿಯ ಕಥೆ ಮುಗಿಸಿದ ಗಂಡ