ಕೋಲಾರ: ರಾಮನಗರದ ಬಿಡದಿಯ ಟೊಯೊಟಾ ಕಂಪನಿಯಲ್ಲಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಸುಖಾಂತ್ಯ ಕಾಣಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭರವಸೆ ನೀಡಿದರು.
ನಗರದ ವಿಸ್ಟ್ರಾನ್ ಕಂಪನಿಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾರ್ಮಿಕರ ಪ್ರತಿಭಟನೆ 26ನೇ ದಿನಕ್ಕೆ ಕಾಲಿಟ್ಟಿದ್ದು ಕಾರ್ಮಿಕರ ಮನವೊಲಿಸುವ ಕೆಲಸ ನಡೆದಿದೆ. ಅಲ್ಲದೆ ಇಂದಿನಿಂದ ಫಸ್ಟ್ ಶಿಫ್ಟ್ ಕೆಲಸ ಆರಂಭವಾಗಿದೆ. ಇನ್ನೊಂದೆರಡು ದಿನದಲ್ಲಿ ಸಿಎಂ ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ಸಭೆ ನಡೆಸಿ ಸೆಕೆಂಡ್ ಶಿಫ್ಟ್ ಕೆಲಸ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಓದಿ: ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ನಾಳೆ ಮೋದಿ ಚಾಲನೆ
ಕಂಪನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರಿಬ್ಬರಿಗೆ ನೋಟಿಸ್ ನೀಡಲಾಗಿತ್ತು. ಇದಾದ ನಂತರ ಆಡಳಿತ ಮಂಡಳಿಯವರು ಕಂಪನಿ ಪ್ರಾರಂಭಿಸಿದ್ದರೂ ಸಹ ಒಂದು ವಾರ ಯಾರೊಬ್ಬ ಕಾರ್ಮಿಕನು ಕೆಲಸಕ್ಕೆ ಹಾಜರಾಗಲಿಲ್ಲ ಎಂದರು.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಅಡಳಿತ ಮಂಡಳಿ, ಕಾರ್ಮಿಕ ಯೂನಿಯನ್ಗಳ ನಡುವೆ ಮೂರು ಸಭೆಗಳನ್ನು ಮಾಡಿದ್ದು, ಫಲ ನೀಡಿದೆ. ಅಲ್ಲದೆ, ಕಂಪನಿ ಸುಲಲಿತವಾಗಿ ಕಾರ್ಯಾರಂಭ ಮಾಡಲಿದ್ದು, ಸರ್ಕಾರ ಕಂಪನಿ ಜೊತೆಗೆ ಮಾತನಾಡಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂದು ಹೇಳಿದರು.