ಕೋಲಾರ : ರಾಜಕೀಯ ವೈಷಮ್ಯದ ಹಿನ್ನೆಲೆ 15 ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಂದು ಜಿಲ್ಲಾ ಸತ್ತ್ರ ನ್ಯಾಯಾಲಯದಿಂದ ಆದೇಶ ಹೊರಡಿಸಿದೆ.
ಪ್ರಕರಣ ಹಿನ್ನೆಲೆ: 2016 ಜುಲೈ 22 ರಂದು ಕೋಲಾರ ತಾಲೂಕು ವಡಗೂರು ಗ್ರಾಮದಲ್ಲಿ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರಾದ ವಡಗೂರು ನಾಗರಾಜ್ ಹಾಗೂ ದೊಡ್ಡಪ್ಪಯ್ಯ ನಡುವೆ ಜುಲೈ-21 ರಂದು ಗಲಾಟೆ ನಡೆದಿರುತ್ತದೆ. ಅದರ ಪ್ರತಿಫಲವಾಗಿ ಜುಲೈ 22 ರಂದು ವಡಗೂರು ನಾಗರಾಜ್ ತಮ್ಮ ಬೆಂಬಲಿಗರೊಂದಿಗೆ ದೊಡ್ಡಪ್ಪಯ್ಯ ಮನೆ ಬಳಿ ಹೋದಾಗ ಮಾತಿಗೆ ಮಾತು ಬೆಳೆದು ದೊಡ್ಡಪ್ಪಯ್ಯನ ಮಗ ಸೋಮಶೇಖರ್ ತಮ್ಮ ಮನೆಯಲ್ಲಿದ್ದ ಗನ್ ನಿಂದ ಜೈರಾಮ್ ಎಂಬ ವ್ಯಕ್ತಿಯನ್ನು ಶೂಟ್ ಮಾಡುತ್ತಾರೆ. ಈ ವೇಳೆ ಜೈರಾಮ್, ಲಕ್ಷ್ಮೀಪತಿ, ನಾರಾಯಣಪ್ಪ ಎಂಬುವರು ತೀವ್ರವಾಗಿ ಗಾಯಗೊಂಡು, ಜೈರಾಮ್ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾರೆ.
ಇದನ್ನು ತಿಳಿದ ಉದ್ರಿಕ್ತರ ಗುಂಪು ದೊಡ್ಡಪ್ಪಯ್ಯನ ಮನೆಗೆ ನುಗ್ಗಿ ದೊಡ್ಡಪ್ಪಯ್ಯನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡುತ್ತಾರೆ. ಈ ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿತ್ತು. ದೊಡ್ಡಪ್ಪಯ್ಯ ಕೊಲೆ ಪ್ರಕರಣದಲ್ಲಿ 26 ಜನ ಆರೋಪಿಗಳೆಂದು ಪರಿಗಣಿಸಿ, 46 ಜನ ಸಾಕ್ಷಿ ದಾಖಲು ಮಾಡಿ ನ್ಯಾಯಾಲಯದಲ್ಲಿ 15 ವರ್ಷಗಳ ಕಾಲ ವಾದ ಪ್ರತಿವಾದ ನಡೆದ ನಂತರ ಕೋಲಾರ ಒಂದನೇ ಹೆಚ್ಚುವರಿ ಸತ್ರನ್ಯಾಯಾಲಯ ಇಂದು ಆದೇಶ ಪ್ರಕಟಿಸಿದೆ. ಈ ಪೈಕಿ ದೊಡ್ಡಪ್ಪಯ್ಯ ಕೊಲೆ ಪ್ರಕರಣದಲ್ಲಿ ಪ್ರಮುಖ ಐದು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪೈಕಿ ಹಾಲಿ ಕೃಷಿಕ ಸಮಾಜದ ಅಧ್ಯಕ್ಷ ವಡಗೂರು ನಾಗರಾಜ್, ಗೋವಿಂದಪ್ಪ, ರೆಡ್ಡಿ, ವಿ.ಎಂ. ಸೋಮಶೇಖರ್, ಮುನಿಬೈಯ್ಯಪ್ಪ ಸೇರಿ ಐದು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ವಡಗೂರ್ ನಾಗರಾಜ್ ತಮ್ಮ ಗುಂಪಿನೊಂದಿಗೆ ದೊಡ್ಡಪ್ಪಯ್ಯ ಮನೆ ಬಳಿ ಹೋದಾಗ ಉದ್ರಿಕ್ತ ಜನರ ಮೇಲೆ ಗನ್ ನಿಂದ ಶೂಟ್ ಮಾಡಿ ಕೊಲೆ ಮಾಡಿದ್ದ, ದೊಡ್ಡಪ್ಪಯ್ಯ ಮಗ ಸೋಮಶೇಖರ್ ಎಂಬಾತನ ಮೇಲೂ ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸೋಮಶೇಖರ್ ಒಬ್ಬರನ್ನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ಪ್ರಕರಣದ ಸಂಬಂಧ ಆದೇಶ ಪ್ರಕಟಿಸಿ, ಗನ್ನಿಂದ ಶೂಟ್ ಮಾಡಿ ವಡಗೂರು ನಾಗರಾಜ್ ಬೆಂಬಲಿಗ ಜೈರಾಮ್ ನನ್ನು ಕೊಲೆ ಮಾಡಿದ ಆರೋಪದಡಿಯಲ್ಲಿ ಸೋಮಶೇಖರ್ಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ಒಂದು ಲಕ್ಷ ರೂ. ದಂಡ ವಿಧಿಸಿದೆ. ಆ ದಂಡದ ಹಣವನ್ನು ಕೊಲೆಯಾದ ಜೈರಾಮ್ ಕುಟುಂಬಸ್ಥರು ಹಾಗೂ ಗಾಯಗೊಂಡಿದ್ದ ಲಕ್ಷ್ಮೀಪತಿ ನಾರಾಯಣಪ್ಪರಿಗೆ ನೀಡುವಂತೆ ಕೋರ್ಟ್ ಆದೇಶ ನೀಡಿದೆ.
ಓದಿ : ಪೊಲೀಸರ ಭದ್ರತೆ ಮಧ್ಯೆಯೂ ಬಸ್ ಮೇಲೆ ಕಲ್ಲು ತೂರಾಟ
ಜಿಲ್ಲೆಯಲ್ಲಿ ಸಾಕಷ್ಟು ಸೆನ್ಸೇಷನ್ ಉಂಟುಮಾಡಿದ್ದ ವಡಗೂರು ಜೋಡಿ ಕೊಲೆ ಪ್ರಕರಣದ ಆದೇಶ ಹಿನ್ನೆಲೆಯಲ್ಲಿ ವಡಗೂರ್ ಗ್ರಾಮದಲ್ಲಿ ಹಾಗೂ ನ್ಯಾಯಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.