ಕೋಲಾರ: ರಾಜ್ಯ ಬಿಜೆಪಿ ಸರ್ಕಾರದ ಆಯುಷ್ಯ ಕೇವಲ 6 ತಿಂಗಳು ಮಾತ್ರ. ರಾಜೀನಾಮೆ ನೀಡಿರುವ 15 ಶಾಸಕರಲ್ಲಿ ಯಾರೂ ಅತೃಪ್ತರಿಲ್ಲ, ಅವರೆಲ್ಲಾ ಸಂತೃಪ್ತರು. ಅವರನ್ನ ಸಿಎಂ ಯಡಿಯೂರಪ್ಪನವರು ಕೂಡ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.
ಕೋಲಾರದ ಬಂಗಾರಪೇಟೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದಲ್ಲೂ ಗುಂಪುಗಾರಿಕೆ ಹೆಚ್ಚಾಗಿದೆ. ಸಿಎಂ ಯಡಿಯೂರಪ್ಪ ಕೂಡ 15 ಜನ ಅತೃಪ್ತರನ್ನ ತೃಪ್ತಿಪಡಿಸಲಾಗುವುದಿಲ್ಲ. ಹಾಗಾಗಿ ಸರ್ಕಾರದ ಭವಿಷ್ಯ ಕೇವಲ 6 ತಿಂಗಳು ಮಾತ್ರ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿರುವುದು ಸರಿಯಲ್ಲ. ಟಿಪ್ಪು ಹುಟ್ಟು ಹೋರಾಟಗಾರ. ಅವರನ್ನ ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಸಮಾಜವನ್ನ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದರು.