ಕೋಲಾರ: ಕೊರೊನಾ ಆತಂಕದಲ್ಲಿ ಇಡೀ ಭಾರತವೇ ಲಾಕ್ ಡೌನ್ ಆಗಿದ್ದರೂ ಕೋಲಾರದ ಮಾಲೂರಿನ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದು ಮುಂಜಾಗ್ರತಾ ಕ್ರಮಗಳನ್ನ ಒದಗಿಸದೇ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಜೋ ಬ್ಲಾಂಡ್ ಎಂಬ ಕಂಪನಿಯಲ್ಲಿ ಪ್ರತಿ ಶಿಫ್ಟ್ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದು, ಕೊರೊನಾ ಹಿನ್ನೆಲೆ ಯಾವುದೇ ಮುನ್ನಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿಲ್ಲ ಎಂದು ಸ್ವತಃ ಕಾರ್ಮಿಕರೇ ಅರೋಪಿಸಿದ್ದಾರೆ.
ಪ್ಲಾಸ್ಟಿಕ್ ಕವರ್ ತಯಾರು ಮಾಡುವಂತಹ ಕಂಪನಿ ಇದಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುವಂತಹ ಕಾರ್ಮಿಕರು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೇ ಆಹಾರ ಪದಾರ್ಥಗಳಿಗೆ ಅವಶ್ಯಕತೆ ಇರುವ ಪ್ಲಾಸ್ಟಿಕ್ ಕವರ್ ತಯಾರಿಸಲು ಸಂಬಂಧ ಇಲಾಖೆಯಿಂದ ಅನುಮತಿ ಪಡೆದಿರುವ ಕಂಪನಿ, ಕವರ್ ತಯಾರಿಕೆ ಮಾತ್ರವಲ್ಲದೇ ಇನ್ನೂ ಬೇರೆ ಬೇರೆ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಲಾಕ್ಡೌನ್ ಹಿನ್ನೆಲೆ ಕಾರ್ಖಾನೆಗೆ ಬರಲು ವಾಹನ ಸೌಲಭ್ಯ ಇಲ್ಲದಂತಾಗಿದೆ. ಆದರೆ, ಕಾರ್ಮಿಕರಿಗೆ ವಾಹನ ಸೌಲಭ್ಯವನ್ನ ಒದಗಿಸದೆಯೇ ಕಂಪನಿಗೆ ಬರಬೇಕೆಂದು ಕಂಪನಿ ಮಾಲೀಕರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.