ಕೋಲಾರ: ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ಅವರು ಜೀವಂತವಾಗಿದ್ದಾರೆ. ಯಾರೂ ತಪ್ಪು ಮಾಹಿತಿ ನೀಡಬೇಡಿ ಎಂದು ಆಸ್ಪತ್ರೆ ಆಡಳಿತ ಮಂಡಳಿ ಕಾರ್ಯದರ್ಶಿ ಹಾಗೂ ಜಾಲಪ್ಪ ಅವರ ಅಳಿಯ ಜಿ.ಹೆಚ್ ನಾಗರಾಜ್ ಮನವಿ ಮಾಡಿದ್ದಾರೆ.
ಆರ್ ಎಲ್ ಜಾಲಪ್ಪ ಮೃತಪಟ್ಟಿದ್ದಾರೆ ಎಂದು ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ ಜಾಲಪ್ಪ ದಾಖಲಾಗಿರುವ ಆಸ್ಪತ್ರೆ ಆಡಳಿತ ಮಂಡಳಿ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. ಮಾಹಿತಿ ಕೊರತೆಯಿಂದ ನಾಯಕರು ಟ್ವೀಟ್ ಮಾಡುತ್ತಿದ್ದಾರೆ ಎಂದು ನಾಗರಾಜ್ ಹೇಳಿದ್ದಾರೆ.
ಹೃದಯ ಬಡಿತ ಸಾಧಾರಣವಾಗಿದೆ, ಕಿಡ್ನಿ ಸಮಸ್ಯೆಯಿದೆ, ಮೆದುಳಿನ ಶಸ್ತ್ರ ಚಿಕಿತ್ಸೆಯೂ ಆಗಿದೆ. ಜಾಲಪ್ಪ ಅವರ ಸ್ಥಿತಿ ಗಂಭೀರವಾಗಿದೆ. ಕೊನೆ ಗಳಿಗೆ ಹಿನ್ನೆಲೆ ಅಂತಿಮ ದರ್ಶನದ ಸಿದ್ದತೆ ಮಾಡಿಕೊಂಡಿದ್ದೇವೆ. ಕೋಲಾರದ ಜಾಲಪ್ಪ ಆಸ್ಪತ್ರೆ ಹಾಗೂ ದೊಡ್ಡಬಳ್ಳಾಪುರ ಎರಡು ಕಡೆ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿದ್ದೇವೆ. ನಮ್ಮ ತಂದೆ ಇನ್ನೂ ಜೀವಂತವಾಗಿದ್ದಾರೆ, ಆದರೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಜಾಲಪ್ಪ ಆಸ್ಪತ್ರೆ ಐಸಿಯು ಬಳಿ ಪುತ್ರ ರಾಜೇಂದ್ರ ತಿಳಿಸಿದ್ದಾರೆ.