ಕೋಲಾರ: ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದ ಕುಖ್ಯಾತ ಕಾರು, ಬೈಕ್ ಕಳ್ಳರನ್ನು ಕೋಲಾರ ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ನಗರಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಸುಮಾರು ಹನ್ನೊಂದು ಲಕ್ಷ ಮೌಲ್ಯದ ಮೂರು ಕಾರುಗಳು, ಬೈಕ್ ಸೇರಿದಂತೆ ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತರಿಬ್ಬರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರಪನಹಳ್ಳಿ ಗ್ರಾಮದ ಶ್ರೀನಿವಾಸ್ ಹಾಗೂ ತಮಿಳುನಾಡು ಮೂಲದ ಹೊಸೂರು ತಾಲೂಕು ಬಾಗಲೂರಿನ ಮೊಹಬೂಬ್ ಪಾಷಾ ಎಂದು ತಿಳಿದು ಬಂದಿದೆ.
ಇನ್ನು ಕುಖ್ಯಾತ ಕಳ್ಳರಿಂದ ಟಾಟಾ ಕಾರು, ಹುಂಡಾಯ್ ಎಲೆಂಟ್ರಾ ಕಾರು, ಮಾರುತಿ ಬಲೆನೋ ಕಾರು, ದ್ವಿಚಕ್ರ ವಾಹನ ಸೇರಿದಂತೆ 50 ಸಾವಿರ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಕೋಲಾರ, ಬೆಂಗಳೂರು ನಗರದ ಮೈಕೋ ಲೇಔಟ್, ಜೆ.ಪಿ. ನಗರ ಸೇರಿದಂತೆ ತಿರುಮಲಶೆಟ್ಟಿ ಗ್ರಾಮದ ಬಳಿ 50 ಸಾವಿರ ರೂಪಾಯಿ ಸುಲಿಗೆ ಮಾಡಿದ್ದು, ಈ ಹಿಂದೆ ರಾಮನಗರ ಜಿಲ್ಲೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನ ಭಾಗಿಯಾಗಿದ್ದವರು ಎಂದು ತಿಳಿದು ಬಂದಿದೆ.