ಕೋಲಾರ : ಏಪ್ರಿಲ್ 10 ರಂದು ಕೋಲಾರಕ್ಕೆ ರಾಹುಲ್ ಗಾಂಧಿ ಅವರು ಆಗಮಿಸುತ್ತಿರುವ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರ ನೇತೃತ್ವದಲ್ಲಿ ದೆಹಲಿಯ ತಂಡ ಕೋಲಾರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಲೀಂ ಅಹ್ಮದ್ ಅವರು, ಏಪ್ರಿಲ್ 10 ರಂದು ಕೋಲಾರದಲ್ಲಿ ಜೈ ಭಾರತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ, ರಾಜಸ್ಥಾನ, ಛತ್ತೀಸ್ಘಡ್ ಹಾಗೂ ಹಿಮಾಚಲ ಪ್ರದೇಶದ ಸಿಎಂಗಳು ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿ ಹುನ್ನಾರಕ್ಕೆ ರಾಹುಲ್ ಗಾಂಧಿ ಹೆದರುವುದಿಲ್ಲ- ಸಲೀಂ ಅಹ್ಮದ್.. ಈ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಲಿದ್ದು, ರಾಹುಲ್ ಗಾಂಧಿ ಅವರ ವಿರುದ್ದ ಬಿಜೆಪಿ ಅವರು ಮಾಡಿರುವ ಷಡ್ಯಂತ್ರದ ಕುರಿತು ಮಾತನಾಡಲಿದ್ದಾರೆ. ಇನ್ನು ಬಿಜೆಪಿಯವರ ಹುನ್ನಾರಕ್ಕೆ ರಾಹುಲ್ ಗಾಂಧಿ ಹೆದರುವುದಿಲ್ಲ, ಕೋಟ್ಯಾಂತರ ಜನರ ಆಶೀರ್ವಾದ ಅವರ ಮೇಲೆ ಇದೆ. ಇದರೊಂದಿಗೆ ಅವರ ಜೊತೆ ಕಾಂಗ್ರೆಸ್ ಪಕ್ಷ ಇದೆ ಎಂದು ಸಲೀಂ ಅಹ್ಮದ್ ಹೇಳಿದರು.
ರೌಡಿಗಳಿಗೆ ಮಣೆ ಹಾಕಲು ಬಿಜೆಪಿ ಹೊರಟಿದೆ- ಸಲೀಂ ಅಹ್ಮದ್ : ಅಲ್ಲದೆ ರಾಜ್ಯದಲ್ಲಿ ಚುನಾವಣೆಯ ಕುರಿತು ವಾಹಿನಿಗಳಲ್ಲಿ ಸಮೀಕ್ಷೆ ಹೊರ ಬಿದಿದ್ದೆ. ಈ ಹಿನ್ನಲೆ ಬಿಜೆಪಿಯವರು ಸೋಲುವ ಭೀತಿಯಲ್ಲಿ ಭ್ರಮನಿರಸನಗೊಂಡಿದ್ದು, ಇದರಿಂದ ರಾಜ್ಯಕ್ಕೆ ರಾಹುಲ್ ಗಾಂಧಿ ಬರುವುದನ್ನು ತಡೆಯುತ್ತಿದೆ. ಇನ್ನು ಬಿಜೆಪಿಯಲ್ಲಿ ರೌಡಿಗಳು, ದಲ್ಲಾಳಿಗಳು ಹಾಗೂ ಭ್ರಷ್ಟಾಚಾರಿಗಳಿರುವಂತಹ ಸರ್ಕಾರ, ಮೋದಿ ಅವರೇ ಫೈಟರ್ ರವಿ ಅಂತಹ ರೌಡಿಗೆ ಕೈ ಮುಗಿಯುತ್ತಾರೆ. ಚುನಾವಣೆಯಲ್ಲಿ ರೌಡಿಗಳಿಗೆ ಮಣೆ ಹಾಕಲು ಬಿಜೆಪಿ ಹೊರಟಿದೆ ಎಂದು ಬಿಜೆಪಿ ವಿರುದ್ಧ ಸಲೀಂ ಅಹ್ಮದ್ ಕಿಡಿಕಾರಿದರು.
ಬಳಿಕ ಮಾತು ಮುಂದುವರಿಸಿದ ಸಲೀಂ ಅವರು ರಾಜ್ಯದಲ್ಲಿ ಕಾಂಗ್ರೇಸ್ ಗೆ 150 ಸ್ಥಾನ ಬರುವುದು ಖಚಿತ, ಜೊತೆಗೆ ಭಾರತ್ ಜೊಡೋ ಕಾರ್ಯಕ್ರಮದಿಂದ ಬಿಜೆಪಿ ಹೆದರಿರುವ ಪರಿಣಾಮ ರಾಹುಲ್ ಗಾಂಧಿ ಅವರನ್ನ ತಡೆಯುವಂತಹ ಹುನ್ನಾರ ಮಾಡುತ್ತಿದ್ದಾರೆ. ಆದರೆ ರಾಹುಲ್ ಗಾಂದಿಯನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿನ ಭ್ರಷ್ಟ ಸರ್ಕಾರವನ್ನು ತೆಗೆಯುವಂತಹ ಕೆಲಸ ಆಗಬೇಕು- ಸಲೀಂ ಅಹ್ಮದ್: ಇನ್ನೂ ಕಾಂಗ್ರೆಸ್ನಲ್ಲಿ ಎದ್ದಿರುವ ಸಿಎಂ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಮೊದಲು ಭ್ರಷ್ಟ ಹಾಗೂ ಲೂಟಿಕೋರರ ಸರ್ಕಾರವನ್ನು ತೆಗೆಯುವಂತಹ ಕೆಲಸ ಆಗಬೇಕು. ನಂತರ ಶಾಸಕರು ಹಾಗೂ ಹೈಕಮಾಂಡ್ ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಮಾಡುತ್ತಾರೆ. ಯಾರು ಸಹ ಸಿಎಂ ಆಕಾಂಕ್ಷಿ ಆಗುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ನಮ್ಮ ಮೊದಲನೇ ಕರ್ತವ್ಯ ನಾವು ಅಧಿಕಾರಕ್ಕೆ ಬರಬೇಕು. ಹಾಗು ಜನ ವಿರೋಧಿ ಸರ್ಕಾರವನ್ನು ತೆಗೆಯಬೇಕು ಎನ್ನುವುದು ಗುರಿ ಎಂದು ಸಲೀಂ ಅಹ್ಮದ್ ಹೇಳಿದರು.
ಕಾಂಗ್ರೆಸ್ನಲ್ಲಿ ಯಾವ ಗೊಂದಲ ಇಲ್ಲ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತಿದ್ದೇವೆ. ಈಗಾಗಲೇ ಮೊದಲನೇ ಪಟ್ಟಿ ಬಿಡುಗಡೆ ಮಾಡಿದ್ದು, ಬಿಜೆಪಿ ಅವರಿಗೆ ಇವತ್ತಿಗೂ ಪಟ್ಟಿ ಬಿಡುಗಡೆ ಮಾಡುವ ಶಕ್ತಿ ಇಲ್ಲ. ಬಿಜೆಪಿ ಅವರದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಇದು ಹಳಿ ತಪ್ಪಿದ ಡಬ್ಬ ಇಂಜಿನ್ ಸರ್ಕಾರ, ಈ ಸರ್ಕಾರಕ್ಕೆ ಯಾವುದೇ ಬದ್ದತೆ ಇಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಪ್ರಧಾನಿ ಮೋದಿ ಬಂಡೀಪುರ ಭೇಟಿ: 4 ದಿನ ಸಫಾರಿ ಇರಲ್ಲ, ರೆಸಾರ್ಟ್, ಹೋಂಸ್ಟೇಗೆ ನಿರ್ಬಂಧ