ಕೋಲಾರ: ಸಂಸದ ಮುನಿಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪಿಡಬ್ಲ್ಯುಡಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ದೂರು ಕೊಡಲು ಮುಂದಾಗಿದ್ದಾರೆ.
ಕೋಲಾರದ ಹೊರವಲಯದ ಅರಣ್ಯ ಅತಿಥಿ ಗೃಹದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸಂಸದ ಮುನಿಸ್ವಾಮಿ ಪಿಡಬ್ಲ್ಯುಡಿ ಇಲಾಖೆಯ ಇಂಜಿನಿಯರ್ಗಳನ್ನು ಮನಸೋ ಇಚ್ಛೆ ಬೈದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಂಗಾರಪೇಟೆ ಸೇರಿದಂತೆ ಕೋಲಾರ ಜಿಲ್ಲೆಯ ಬಹುತೇಕ ಕಡೆ ಎಸ್‌ಎಪಿ ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಸಂಸದರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾಗಿ ಆರೋಪಿಸಿದ್ದಾರೆ.
ಆದರೆ, ಎಸ್ ಎಪಿ ಕಾಮಗಾರಿಗಳಿಗೆ ಸ್ಥಳೀಯ ಶಾಸಕರನ್ನು ಕರೆದು ಶಂಕುಸ್ಥಾಪನೆ ಮಾಡಲಾಗುತ್ತಿದೆ. ಶಾಸಕರು ಇಲ್ಲದಿದ್ದರೆ ಅನುದಾನ ವಾಪಸ್ ಹೋಗಬಾರದೆಂದು ಯಾರಿಗೂ ಕಾಯದೆ ಕಾಮಗಾರಿಗಳಿಗೆ ಚಾಲನೆ ನೀಡಲಾಗ್ತಿದೆ. ಇದರ ಬಗ್ಗೆ ಶಾಸಕರಿಗೂ ಕೂಡ ಮಾಹಿತಿ ನೀಡಲಾಗಿದೆ. ಸಂಸದರನ್ನು ಕರೆಯುವಂತಹ ಪರಿಪಾಠವನ್ನು ರೂಢಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಟೋಲ್ ಪ್ಲಾಜಾ ಗಲಾಟೆ ಪ್ರಕರಣ : ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲು
ಸಂಸದರ ನಿಂದನೆಯಿಂದ ಬೇಸತ್ತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಭೆ ಬಹಿಷ್ಕರಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.